
Sidlaghatta : “ಜನರು ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಹೆಚ್ಚಾಗಿ ಬಳಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ, ಹಾಲು ಉತ್ಪಾದಕರು ಹಾಗೂ ಸಹಕಾರ ಸಂಘಗಳ ಉಳಿವಿಗಾಗಿ ಸಹಕರಿಸಬೇಕು” ಎಂದು ಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಕರೆ ನೀಡಿದರು.
ವಿಶ್ವ ಹಾಲು ದಿನಾಚರಣೆಯ ಪ್ರಯುಕ್ತ ಸೋಮವಾರ ನಗರದ ಚಿಮುಲ್ ಶಿಬಿರ ಘಟಕದ ವತಿಯಿಂದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಉಚಿತವಾಗಿ ನಂದಿನಿ ಗುಡ್‌ಲೈಫ್ ಹಾಲನ್ನು ವಿತರಿಸಿ ಅವರು ಮಾತನಾಡಿದರು.
ಕರ್ನಾಟಕದ ‘ಕ್ಷೀರ ಬ್ರಹ್ಮ’ ಎಂದು ಹೆಸರಾದ ಎಂ.ವಿ. ಕೃಷ್ಣಪ್ಪನವರ ಕೊಡುಗೆಯನ್ನು ಸ್ಮರಿಸಿದ ಬಂಕ್ ಮುನಿಯಪ್ಪ, ವಿದೇಶಗಳಿಂದ ಉತ್ತಮ ತಳಿಯ ರಾಸುಗಳನ್ನು ತಂದು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕ್ಷೀರ ಕ್ರಾಂತಿಯನ್ನು ಸೃಷ್ಟಿಸುವ ಮೂಲಕ ರೈತರ ಆರ್ಥಿಕ ಅಭಿವೃದ್ಧಿಗೆ ಅವರು ನಾಂದಿ ಹಾಡಿದ್ದಾರೆ ಎಂದರು. ಅಂತಹ ಮಹಾಪುರುಷರ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಉತ್ತಮ ಗುಣಮಟ್ಟದ ನಂದಿನಿ ಹಾಲನ್ನು ಬಳಸುವುದರಿಂದ ಬರುವ ಆದಾಯವು ನೇರವಾಗಿ ಹಾಲು ಉತ್ಪಾದಕರಿಗೆ ತಲುಪುತ್ತದೆ. ಇದರಿಂದ ಸಹಕಾರ ಸಂಘಗಳು ಮತ್ತಷ್ಟು ಬಲವರ್ಧನೆಯಾಗುತ್ತವೆ ಎಂದು ಅವರು ವಿವರಿಸಿದರು.
ಚಿಮುಲ್ ನಿರ್ದೇಶಕ ಹುಜಗೂರು ರಾಮಯ್ಯ ಮಾತನಾಡಿ, ಪ್ರತಿ ವರ್ಷ ಜೂನ್ 1 ರಂದು ವಿಶ್ವ ಹಾಲು ದಿನವನ್ನು ಆಚರಿಸುವ ಮೂಲಕ ಹಾಲಿನ ಮಹತ್ವ ಮತ್ತು ಸೇವನೆಯಿಂದ ಆಗುವ ಆರೋಗ್ಯದ ಪ್ರಯೋಜನಗಳ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶಮೂರ್ತಿ, ವೈದ್ಯ ಡಾ. ಮನೋಹರ್, ಶಿಬಿರ ಘಟಕದ ವ್ಯವಸ್ಥಾಪಕ ಡಾ. ರವಿಕಿರಣ್ ಹಾಗೂ ಚಿಮುಲ್ ಶಿಬಿರ ಘಟಕದ ಅಧಿಕಾರಿಗಳಾದ ಜಯಚಂದ್ರ, ಎಂ.ಆರ್. ಮಂಜುನಾಥ್, ನರಸಿಂಹಯ್ಯ ಮತ್ತು ಡಿ. ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.