ಪೂರ್ಣ ಪುಟ · Open full page

ಪ್ರಜಾಸೇವಾ ಆಂದೋಲನ: ಮುಂದಿನ ಶನಿವಾರದೊಳಗೆ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳಿಗೆ ಶಾಸಕರ ಗಡುವು

MLA B.N. Ravikumar and officials listening to a villager's petition at the Praja Seva Andolana grievance programme held under a decorated pandal in Sadali hobli, Sidlaghatta taluk

Sidlaghatta : ಸರ್ಕಾರಿ ಕಚೇರಿಗಳಿಗೆ ಅಲೆದಾಡದೆ ಗ್ರಾಮ ಪಂಚಾಯಿತಿ ಮಟ್ಟದಲ್ಲೇ ವಿವಿಧ ಇಲಾಖೆಗಳ ಸೇವೆಗಳು ಜನರಿಗೆ ಸಿಗಬೇಕು ಎಂಬ ಉದ್ದೇಶದಿಂದ ಎಸ್. ದೇವಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶನಿವಾರ ಪ್ರಜಾಸೇವಾ ಆಂದೋಲನ ಕಾರ್ಯಕ್ರಮ ನಡೆಯಿತು.

ಶಾಸಕ ಬಿ.ಎನ್. ರವಿಕುಮಾರ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ತಾಲ್ಲೂಕಿನಲ್ಲಿ ನಡೆಯುತ್ತಿರುವ ಐದನೇ ಜನಸ್ಪಂದನ ಕಾರ್ಯಕ್ರಮ ಇದು ಎಂದು ಅವರು ಹೇಳಿದರು. ಗ್ರಾಮೀಣ ಭಾಗದ ಜನರು ಕುಂದುಕೊರತೆ ಪರಿಹಾರಕ್ಕೆ ಕಚೇರಿಗಳಿಗೆ ಅಲೆಯುವ ಸ್ಥಿತಿ ತಪ್ಪಿಸುವುದು, ಆಡಳಿತವನ್ನು ಜನರ ಬಳಿಗೇ ತಂದು ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳುವುದು ಇದರ ಮುಖ್ಯ ಆಶಯ ಎಂದರು.

ಕುಡಿಯುವ ನೀರು, ರಸ್ತೆ, ಚರಂಡಿ, ಬೀದಿ ದೀಪದಂತಹ ಮೂಲಸೌಕರ್ಯಗಳ ಕೊರತೆ ಆಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ತಾಲ್ಲೂಕಿನ ಹಾಗೂ ಸಾದಲಿ ಹೋಬಳಿಯ ಗ್ರಾಮ ಪಂಚಾಯಿತಿಗಳ ಜನರ ಸಮಸ್ಯೆಗಳಿಗೆ ಆದ್ಯತೆ ನೀಡಿ, ಮುಂದಿನ ಶನಿವಾರದೊಳಗೆ ಪರಿಹರಿಸಲು ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದರು.

ಜನಸ್ಪಂದನ ಮತ್ತು ಪ್ರಜಾಸೇವಾ ಆಂದೋಲನ ಕಾರ್ಯಕ್ರಮಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಪರಿಣಾಮಕಾರಿ ವೇದಿಕೆಗಳಾಗಬೇಕು. ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕೆಲಸ ಮಾಡಿ ಅನಗತ್ಯ ಅಲೆದಾಟ ತಪ್ಪಿಸಬೇಕು, ಜನರು ಸಲ್ಲಿಸುವ ಪ್ರತಿ ಅಹವಾಲಿಗೂ ಸೂಕ್ತ ಸ್ಪಂದನೆ ಸಿಗುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಸಾದಲಿ ಹೋಬಳಿಯ ವಿವಿಧ ಗ್ರಾಮ ಪಂಚಾಯಿತಿಗಳ ಗ್ರಾಮಸ್ಥರು ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು. ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಅಹವಾಲು ಪತ್ರಗಳನ್ನು ಸ್ವೀಕರಿಸಲಾಯಿತು; ಪರಿಹಾರಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು.

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‌ಆರ್‌ಎಲ್‌ಎಂ) ಅಡಿಯಲ್ಲಿ ಮಹಿಳಾ ಸ್ವಸಹಾಯ ಸಂಘಗಳು ದೀಪಾವಳಿ ಹಬ್ಬದ ಪ್ರಯುಕ್ತ ಸಿದ್ಧಪಡಿಸಿದ ದೀಪ ಸಂಜೀವಿನಿ ಕಿಟ್‌ಗಳ ಮಾರಾಟ ಮತ್ತು ಪ್ರದರ್ಶನಕ್ಕೆ ಮಳಿಗೆಗಳನ್ನು ತೆರೆಯಲಾಗಿತ್ತು. ಗ್ರಾಮೀಣ ಮಹಿಳೆಯರ ಉತ್ಪನ್ನಗಳಿಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಸಿಕ್ಕಿತು. ವಿಬಿ-ಜಿ-ರಾಮ್-ಜಿ ಯೋಜನೆಯ ಉದ್ದೇಶ, ಅನುಷ್ಠಾನ ಮತ್ತು ಸೌಲಭ್ಯಗಳ ಬಗ್ಗೆಯೂ ಜನರಿಗೆ ಮಾಹಿತಿ ನೀಡಲಾಯಿತು.

ಶಾಸಕ ಬಿ.ಎನ್. ರವಿಕುಮಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹೇಮಾವತಿ ಆರ್., ಜಿಲ್ಲಾ ಭೂ ದಾಖಲೆಗಳ ಉಪನಿರ್ದೇಶಕ ಮಂಜುನಾಥ, ತಹಶೀಲ್ದಾರ್ ಗಗನ ಸಿಂಧು, ಗ್ರೇಡ್-2 ತಹಶೀಲ್ದಾರ್ ಮಂಜುನಾಥ, ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ತಾಲ್ಲೂಕು ಯೋಜನಾಧಿಕಾರಿ ಅನಿಲ್ ಕುಮಾರ್, ತಾಲ್ಲೂಕು ಐಇಸಿ ಸಂಯೋಜಕ ಲೋಕೇಶ, ಸಾದಲಿ ಹೋಬಳಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ, ಎನ್‌ಆರ್‌ಎಲ್‌ಎಂ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ಸಂಬಂಧಿತ ಸುದ್ದಿ: ನಿಮ್ಮ ಕುಂದುಕೊರತೆ ನೇರವಾಗಿ ಅಧಿಕಾರಿಗಳಿಗೆ ಹೇಳಬೇಕೆ? ನ.7ರ ಜನಸ್ಪಂದನಕ್ಕೆ ಬನ್ನಿ | ಪ್ರಜಾಸೇವಾ ಆಂದೋಲನದಲ್ಲಿ 600ಕ್ಕೂ ಹೆಚ್ಚು ಅರ್ಜಿ: KIADBಗೆ ಜಮೀನು ನೀಡಲು ಒಪ್ಪದ ಸುಮಾರು 200 ರೈತರು

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

Nearby

ಇದನ್ನೂ ಓದಿ

Exit mobile version