ಪೂರ್ಣ ಪುಟ · Open full page

73ನೇ ಸಹಕಾರ ಸಪ್ತಾಹ: ಠೇವಣಿ, ವ್ಯವಹಾರ ಸಹಕಾರ ಬ್ಯಾಂಕ್‌ನಲ್ಲೇ ಇರಲಿ ಎಂದು ರೈತರಿಗೆ ಮನವಿ

District Cooperative Union president H.V. Nagaraj speaking at the 73rd All India Cooperative Week event

Sidlaghatta : ಸಹಕಾರ ಸಪ್ತಾಹದಲ್ಲಿ ಮಾತನಾಡಿದ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ವಿ. ನಾಗರಾಜ್, ದೇಶದ ಜನರು ನೆಮ್ಮದಿಯಿಂದ ಬದುಕಲು ಗಡಿಯಲ್ಲಿ ಸೈನಿಕರು ಮತ್ತು ದೇಶದೊಳಗೆ ರೈತರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವುದೇ ಕಾರಣ ಎಂದು ಹೇಳಿದರು.

ಸಹಕಾರ ಬ್ಯಾಂಕ್‌ಗಳಲ್ಲೇ ವ್ಯವಹರಿಸಲು ಮನವಿ

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಚಿಮುಲ್, ಡಿಸಿಸಿ ಬ್ಯಾಂಕ್ ಸೇರಿದಂತೆ ವಿವಿಧ ಸಹಕಾರ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಬುಧವಾರ ಚಿಮುಲ್ ಶಿಬಿರ ಕಚೇರಿ ಸಭಾಂಗಣದಲ್ಲಿ ನಡೆದ 73ನೇ ಅಖಿಲ ಭಾರತ ಸಹಕಾರ ಸಪ್ತಾಹ–2026 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರೈತರು ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅವರಿಗೆ ಇನ್ನಷ್ಟು ನೆರವು ನೀಡಬೇಕು ಎಂದು ಅವರು ಹೇಳಿದರು. ಸಹಕಾರ ಕ್ಷೇತ್ರದ ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಿ, ಸಹಕಾರಿ ಸಂಸ್ಥೆಗಳ ಸೇವೆಯನ್ನು ರೈತರು ಮತ್ತು ಗ್ರಾಮೀಣ ಜನರ ಮನೆಬಾಗಿಲಿಗೆ ತಲುಪಿಸಬೇಕು ಎಂದರು.

ರೈತರು ಸಹಕಾರ ಸಂಘಗಳಿಂದ ಸಾಲ ಮತ್ತಿತರ ಸೌಲಭ್ಯ ಪಡೆಯುತ್ತಾರೆ. ಆದರೆ ಠೇವಣಿ ಇಡುವುದು ಹಾಗೂ ಹಣಕಾಸಿನ ವ್ಯವಹಾರಗಳನ್ನು ವಾಣಿಜ್ಯ ಬ್ಯಾಂಕುಗಳಲ್ಲಿ ನಡೆಸುತ್ತಾರೆ. ಎಲ್ಲ ಹಣಕಾಸಿನ ವ್ಯವಹಾರಗಳನ್ನು ಸಹಕಾರ ಬ್ಯಾಂಕುಗಳಲ್ಲೇ ಮಾಡಿ ಅವುಗಳ ಆರ್ಥಿಕ ಸದೃಢತೆಗೆ ಕೈಜೋಡಿಸಿದರೆ, ಆ ಬ್ಯಾಂಕುಗಳು ಇನ್ನಷ್ಟು ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದು ಮನವಿ ಮಾಡಿದರು.

ಸಪ್ತಾಹದ ಆಶಯ

ಕೊರೊನಾ ಕಾಲದಲ್ಲಿ ಜಗತ್ತಿನ ಬಹುತೇಕ ಚಟುವಟಿಕೆಗಳು ಸ್ಥಗಿತಗೊಂಡರೂ ರೈತರು ಕೃಷಿ ಕೆಲಸ ನಿಲ್ಲಿಸಲಿಲ್ಲ. ದೇಶಕ್ಕೆ ಅನ್ನ ನೀಡಿದ ರೈತರನ್ನು ಆರ್ಥಿಕವಾಗಿ ಬಲಪಡಿಸಲು ಸಹಕಾರ ಕ್ಷೇತ್ರವನ್ನು ಇನ್ನಷ್ಟು ಬಲಗೊಳಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಉತ್ತಮ ಪರಿಸರ, ತಂತ್ರಜ್ಞಾನ, ಕೌಶಲ ಆಧಾರಿತ ಮತ್ತು ವೃತ್ತಿಪರ ಸೇವೆಗೆ ಆದ್ಯತೆ ನೀಡುವುದು ಹಾಗೂ ಸಾರ್ವಜನಿಕ-ಖಾಸಗಿ ಕ್ಷೇತ್ರಗಳ ಸಹಕಾರಿ ಪಾಲುದಾರಿಕೆಯನ್ನು ಬಲಪಡಿಸುವ ಆಶಯದೊಂದಿಗೆ ಈ ಬಾರಿಯ ಸಪ್ತಾಹ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಹಕಾರ ಕ್ಷೇತ್ರದ ಸಂಸ್ಥಾಪಕ ಸಿದ್ದನಗೌಡ ರಾಮನಗೌಡ ಪಾಟೀಲ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಅರ್ಪಿಸಲಾಯಿತು. ಜಾನುವಾರು ವಿಮೆ ಮಾಡಿಸಿದ್ದ ಹಸುಗಳ ಮಾಲೀಕರಿಗೆ ವಿಮಾ ಮೊತ್ತದ ಚೆಕ್ ವಿತರಿಸಲಾಯಿತು.

ಚಿಮುಲ್ ನಿರ್ದೇಶಕ ಹುಜಗೂರು ರಾಮಣ್ಣ, ಹಾಪ್‌ಕಾಮ್ಸ್ ಅಧ್ಯಕ್ಷ ಮುತ್ತೂರು ಚಂದ್ರೇಗೌಡ, ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷ ಮೇಲೂರು ಮುರಳಿ, ನಿರ್ದೇಶಕರಾದ ಮುರಳಿ, ಅಂಬರೀಷ್, ಪಿ.ಎಲ್‌.ಡಿ ಬ್ಯಾಂಕ್ ಅಧ್ಯಕ್ಷ ಸುರೇಶ್ ಹಾಗೂ ಚಿಮುಲ್ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ರವಿಕಿರಣ್ ಉಪಸ್ಥಿತರಿದ್ದರು.

ಸಂಬಂಧಿತ ಸುದ್ದಿ: ಸಾಲ ಸಕಾಲ ಮರುಪಾವತಿಸಿ ಸಹಕಾರಿ ಕ್ಷೇತ್ರ ಬಲಪಡಿಸಿ: ಆನೆಮಡಗು ಸಂಘ ಅಧ್ಯಕ್ಷ ಸಲಹೆ | ಸಹಕಾರ ಸಂಘಗಳಲ್ಲಿ ರಾಜಕೀಯಕ್ಕೆ ಅವಕಾಶ ಬೇಡ: ಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

Nearby

ಇದನ್ನೂ ಓದಿ

Exit mobile version