Home News H Cross ವೃತ್ತದ ಬಸ್ ನಿಲ್ದಾಣ ಸ್ಥಳಾಂತರ

H Cross ವೃತ್ತದ ಬಸ್ ನಿಲ್ದಾಣ ಸ್ಥಳಾಂತರ

0
Sidlaghatta H Cross Bus stand Relocated

H Cross, sidlaghatta : ಶಿಡ್ಲಘಟ್ಟ ತಾಲ್ಲೂಕಿನ ಕುಂಬಿಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಚ್. ಕ್ರಾಸ್‌ ನಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ಸಮಸ್ಯೆಯನ್ನು ನಿಯಂತ್ರಿಸಲು ಇಲ್ಲಿನ ಬಸ್ ನಿಲ್ದಾಣವನ್ನು ಪೊಲೀಸರು ಬೇರೆಡೆಗೆ ಸ್ಥಳಾಂತರಿಸಿದ್ದಾರೆ.

ಈ ಪ್ರದೇಶವು ನಾಲ್ಕು ತಾಲ್ಲೂಕುಗಳ ಸಂಪರ್ಕ ಕೇಂದ್ರವಾಗಿದೆ. ಉತ್ತರ ದಿಕ್ಕಿಗೆ ಸಾಗಿದರೆ ಚಿಂತಾಮಣಿ ತಾಲ್ಲೂಕು, ದಕ್ಷಿಣಕ್ಕೆ ಸುಮಾರು ಒಂದು ಕಿಲೋಮೀಟರ್‌ ದೂರದಲ್ಲಿ ಹೊಸಕೋಟೆ ತಾಲ್ಲೂಕು ಗಡಿ ಹಾಗೂ ಪೂರ್ವಕ್ಕೆ ಒಂದು ಕಿಲೋಮೀಟರ್‌ ಹೋದರೆ ಕೋಲಾರ ತಾಲ್ಲೂಕು ವ್ಯಾಪ್ತಿ ಆರಂಭವಾಗುತ್ತದೆ. ಈ ಎಲ್ಲಾ ಭಾಗಗಳ ಮಧ್ಯದಲ್ಲಿರುವ ಎಚ್ ಕ್ರಾಸ್‌ ಮೂಲಕ ಕೋಲಾರ, ಚಿಂತಾಮಣಿ, ಬೆಂಗಳೂರು, ಚಿಕ್ಕಬಳ್ಳಾಪುರ ಸೇರಿದಂತೆ ಮತ್ತಿತರ ಮಾರ್ಗಗಳಿಗೆ ವಾಹನ ಸಂಚಾರ ಹೆಚ್ಚಾಗಿರುತ್ತದೆ.

ಈ ಎಲ್ಲಾ ಮಾರ್ಗಗಳಿಗೆ ಸಂಚಾರಕ್ಕೆ ಸಂಪರ್ಕ ಕಲ್ಪಿಸುವ ಕೇಂದ್ರ ಸ್ಥಾನವಾಗಿರುವ ಇಲ್ಲಿ ಈ ಹಿಂದೆ ಸಿಗ್ನಲ್ ಬಳಿಯೇ ಸರ್ಕಾರಿ ಮತ್ತು ಖಾಸಗಿ ಬಸ್ ಗಳನ್ನು ನಿಲ್ಲಿಸಲಾಗುತ್ತಿತ್ತು. ಇದರಿಂದ ಅಪಘಾತಗಳು ಸಂಭವಿಸುತ್ತಿತ್ತು. ಇದನ್ನು ತಪ್ಪಿಸುವ ಉದ್ದೇಶದಿಂದ ಈ ಹಿಂದೆ ಇದ್ದ ಹಳೆಯ ಬಸ್ ನಿಲ್ದಾಣದಿಂದ ಸುಮಾರು 50 ಮೀಟರ್ ಮುಂದಕ್ಕೆ ಸ್ಥಳಾಂತರಿಸುವ ಮೂಲಕ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಮುಂದಾಗಿದ್ದಾರೆ.

ಈ ಹಿಂದೆ ವಾಹನಗಳು ಅಡ್ಡಾದಿಡ್ಡಿ ನಿಲ್ಲುತ್ತಿದ್ದುದರಿಂದ ಸಂಚಾರ ದಟ್ಟಣೆ ಹೆಚ್ಚಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ಈ ಹಿನ್ನೆಲೆ ಹಳೆಯ ನಿಲ್ದಾಣದ ಭಾಗದಲ್ಲಿ ಬ್ಯಾರಿಕೇಡ್‌ ಗಳನ್ನು ಅಳವಡಿಸಿ ವಾಹನ ನಿಲುಗಡೆಗೆ ನಿರ್ಬಂಧ ವಿಧಿಸಲಾಗಿದೆ. ಹೊಸ ವ್ಯವಸ್ಥೆಯಿಂದ ವಾಹನ ಸಂಚಾರ ಸುಗಮವಾಗುವ ನಿರೀಕ್ಷೆ ವ್ಯಕ್ತವಾಗಿದೆ. ಸಾರ್ವಜನಿಕರು ಹಾಗೂ ವಾಹನ ಚಾಲಕರು ಸಹಕರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಇತಿಹಾಸ, ಭೌಗೋಳಿಕ ಹಾಗೂ ವಾಣಿಜ್ಯಿಕ ಮಹತ್ವ ಹೊಂದಿರುವ ಎಚ್. ಕ್ರಾಸ್‌ ಪ್ರದೇಶವನ್ನು ಈ ಹಿಂದೆ “ಅಡ್ರೋಟ್” ಎಂದು ಕರೆಯಲಾಗುತ್ತಿತ್ತೆಂದು ಸ್ಥಳೀಯರು ಹೇಳುತ್ತಾರೆ. ಬಳಿಕ “ಹಿಂಡಿಗನಾಳ ಕ್ರಾಸ್‌” ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆದು, ಕಾಲಕ್ರಮೇಣ “ಎಚ್. ಕ್ರಾಸ್‌” ಕರಿಯನಪುರ ಎಂದು ಪರಿಚಿತವಾಗಿದೆ.

ಬೆಂಗಳೂರು, ಚಿಂತಾಮಣಿ, ಕೋಲಾರ, ಹೊಸಕೋಟೆ ಹಾಗೂ ದೇವನಹಳ್ಳಿ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಜಂಕ್ಷನ್‌ ಆಗಿರುವ ಎಚ್. ಕ್ರಾಸ್‌ ನಲ್ಲಿ ದಿನನಿತ್ಯ ಸಾವಿರಾರು ವಾಹನಗಳ ಸಂಚಾರ ನಡೆಯುತ್ತಿದ್ದು, ಇದೀಗ ಕೈಗೊಂಡಿರುವ ಹೊಸ ಟ್ರಾಫಿಕ್ ವ್ಯವಸ್ಥೆ ಸಾರ್ವಜನಿಕರಿಗೆ ಅನುಕೂಲಕರವಾಗಿದೆ. ಎಚ್. ಕ್ರಾಸ್‌ ವೃತ್ತದ ನಾಲ್ಕು ಕಡೆ ರಸ್ತೆಗಳು ಕಿರಿದಾಗಿರುವುದರಿಂದ ರಸ್ತೆಗಳನ್ನು ವಿಸ್ತರಣೆ ಮಾಡಿದರೆ ಮಾತ್ರ ವಾಹನ ದಟ್ಟಣೆ ಸಮಸ್ಯೆಗೆ ಪರಿಹಾರ ಸಿಗಬಹುದು ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version