Home News ಒಂದನೇ ದೇವರಾಯನ ಶಾಸನವನ್ನು ಸಂರಕ್ಷಿಸುವಂತೆ ಗ್ರಾಮಸ್ಥರಲ್ಲಿ ಮನವಿ

ಒಂದನೇ ದೇವರಾಯನ ಶಾಸನವನ್ನು ಸಂರಕ್ಷಿಸುವಂತೆ ಗ್ರಾಮಸ್ಥರಲ್ಲಿ ಮನವಿ

0
Sidlaghatta Hemarlahalli Historic Inscription

 ತಾಲ್ಲೂಕಿನ ಹೇಮಾರ್ಲಹಳ್ಳಿ ಗ್ರಾಮದಲ್ಲಿ 14ನೇ ಶತಮಾನಕ್ಕೆ (ಕ್ರಿ.ಶ. 1407) ಸೇರಿದ ವಿಜಯನಗರದ ಅರಸ ಒಂದನೇ ದೇವರಾಯನ ಶಾಸನ ಪತ್ತೆಯಾಗಿದೆ. ಕಳೆದ ತಿಂಗಳು ಇತಿಹಾಸ ಆಸಕ್ತರಾದ ಶಶಿಧರ್ ಮತ್ತು ಸುದರ್ಶನ್ ರೆಡ್ಡಿಯವರು ನಡೆಸಿದ್ದ ಪ್ರಾಥಮಿಕ ತನಿಖೆಯಿಂದ ಇದು ವಿಜಯನಗರದ ಕಾಲಕ್ಕೆ ಸೇರಬಹುದಾದ ಶಾಸನ ಎಂದು ತಿಳಿದುಬಂದಿತ್ತು. ಅದರಂತೆ ಶಾಸನ ತಜ್ಞ ಕೆ. ನರಸಿಂಹನ್ ಮತ್ತು ಇತಿಹಾಸ ಸಂಶೋಧಕ ಯುವರಾಜ್ ಸ್ಥಳಕ್ಕೆ ಭೇಟಿ ನೀಡಿ ಶಾಸನವನ್ನು ಓದಿದ್ದಾರೆ.

 ಈ ಸಂದರ್ಭದಲ್ಲಿ ಅವರು ಅಪರೂಪದ ಚಾರಿತ್ರಿಕ ದಾಖಲೆಗಳನ್ನು ಹೊಂದಿರುವ ಶಾಸನದ ಕಲ್ಲುಗಳನ್ನು ಗ್ರಾಮಸ್ಥರು ಸಂರಕ್ಷಿಸಬೇಕು. ಈ ಶಾಸನದ ಅರ್ಥವನ್ನು ವಿವರಿಸುವ ಫಲಕವನ್ನು ಸಿದ್ಧಮಾಡಿಕೊಡುತ್ತೇವೆ. ಇದರಿಂದ ಮುಂದಿನ ಪೀಳಿಗೆಯವರಿಗೆ ಮತ್ತು ಇತಿಹಾಸ ಆಸಕ್ತರಿಗೆ ನೆರವಾಗುತ್ತದೆ” ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.

 “ಈ ಶಾಸನ ರಸ್ತೆ ಕಾಮಗಾರಿ ವೇಳೆ ತುಂಡಾಗಿದ್ದು, ಎರಡು ಚೂರುಗಳು ಸಿಕ್ಕಿಲ್ಲ. ಆದರೆ ಲಭ್ಯವಿದ್ದ ಪಾಠದ ಮೇರೆಗೆ ಇದು ಒಂದನೇ ದೇವರಾಯನ ಸಾಮಂತನಾಗಿದ್ದ ಸೊಣ್ಣಯನಾಯಕನ ಮಗ ಅಂಕಯನಾಯಕ (ಈತನ ಹೆಸರು ಇರಬೇಕಾದ ಭಾಗ ತುಂಡಾಗಿದೆ. ಸಮಕಾಲೀನ ಶಾಸನಗಳ ಆಧಾರದ ಮೇಲೆ ಅಂಕಯನಾಯಕ ಎಂದು ಭಾವಿಸಲಾಗಿದೆ) ಅಚಪ್ಪನಹಳ್ಳಿಯ ಕೆರೆಯ ಕೆಳಗಿನ ಗದ್ದೆಭೂಮಿಯನ್ನು ವಿವಿಧ ಗೋತ್ರದ ಬ್ರಾಹ್ಮಣರಿಗೆ ದಾನವಾಗಿ ನೀಡಿದ ವಿವರಗಳಿವೆ. ಈ ದಾನವನ್ನು ದುರುಪಯೋಗ ಮಾಡಿಕೊಂಡವರಿಗೆ ಉಗ್ರವಾದ ಶಾಪ ತಟ್ಟುತ್ತದೆಯೆಂಬ ಶಾಪಾಶಯದ ಶ್ಲೋಕವಿದೆ. ಹೇಮಾರ್ಲಹಳ್ಳಿಯ ಇತಿಹಾಸ ಆಸಕ್ತರಾದ ಮನೋಹರ್, ಪ್ರವೀಣ್ ಕುಮಾರ್, ಅನಿಲ್ ಮತ್ತು ಮುನಿರಾಜ (ಪುಟ್ಟಣ್ಣ) ಅವರು ಶಾಸನದ ರಕ್ಷಣೆ ಮತ್ತು ಓದುವುದಕ್ಕೆ ಸಹಕಾರ ನೀಡಿದ್ದಾರೆ” ಎಂದು ಶಾಸನ ತಜ್ಞ ಕೆ. ನರಸಿಂಹನ್ ತಿಳಿಸಿದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version