S Devaganahalli, Sidlaghatta, Chikkaballapur : ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಹೋಬಳಿಯ ಎಸ್. ದೇವಗಾನಹಳ್ಳಿ ಗ್ರಾಮದಲ್ಲಿ, ಚೋಳ ರಾಜ ಒಂದನೇ ಕುಲೋತ್ತುಂಗನ ಕಾಲದ ತಮಿಳು ಶಾಸನ ಪತ್ತೆಯಾಗಿದೆ. ಈ ಶಾಸನವು ಕ್ರಿಸ್ತ ಶಕ 1097ರ ಕಾಲಘಟ್ಟಕ್ಕೆ ಸೇರಿದದ್ದು ಎಂದು ಶಾಸನ ತಜ್ಞರು ತಿಳಿಸಿದ್ದಾರೆ.
ಈ ಅಮೂಲ್ಯ ಪುರಾತನ ಶಾಸನವನ್ನು ಶಾಸನ ತಜ್ಞರಾದ ಕೆ. ಧನಪಾಲ್, ಎ.ಎಂ. ತ್ಯಾಗರಾಜ್ (ಅಪ್ಪೇಗೌಡನಹಳ್ಳಿ) ಹಾಗೂ ಕೆ.ಆರ್. ನರಸಿಂಹನ್ ಅವರ ತಂಡ ಪತ್ತೆಹಚ್ಚಿದೆ.
ಗ್ರಾನೈಟ್ ಶಿಲಾಫಲಕದ ಮೇಲೆ ತಮಿಳು–ಗ್ರಂಥ ಲಿಪಿಯಲ್ಲಿ ಕೆತ್ತಲಾಗಿರುವ ಈ ಶಾಸನವು ಸೂರ್ಯ-ಚಂದ್ರ ಚಿಹ್ನೆ ಮತ್ತು ಹಸು-ಕರುವಿನ ಶಿಲ್ಪ ಹೊಂದಿದ್ದು, ಇದು ದಾನ ಶಾಸನಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ವಿನ್ಯಾಸವಾಗಿದೆ. ಶಾಸನವು ಮಣ್ಣಿನಲ್ಲಿ ಮುಚ್ಚಿಹೋಗಿದ್ದರೂ ಸ್ಥಳೀಯ ಶಿಕ್ಷಕ ಸಾದಲಿ ನಾಗೇಶ್ ಮತ್ತು ಗ್ರಾಮಸ್ಥರ ಸಹಕಾರದಿಂದ ಹೊರತೆಗೆದು ಅಧ್ಯಯನ ಮಾಡಲಾಗಿದೆ.
ಶಾಸನದ ಸಾರಾಂಶ:
ಶಾಸನವು ಚೋಳರ ರಾಜನಾದ ಒಂದನೇ ಕುಲೋತ್ತುಂಗ ಚೋಳನ 27ನೇ ಆಳ್ವಿಕೆಯ ಕಾಲದಲ್ಲಿ, ಅಂದರೆ ಕ್ರಿ.ಶ. 1097ರಲ್ಲಿ ಪರದೇಸಿ ವ್ಯಾಪಾರ ಸಂಘದ ಪ್ರಮುಖನಾದ ಕೆಂಜಕೆತ್ತ ಶೆಟ್ಟಿ ಎಂಬುವವರು ನಿಗಿರಿಲಿ ಚೋಳಮಂಡಲದ ಹಿರಿಯ ಸಾದಲಿಯಲ್ಲಿ ಒಂದು ಕೆರೆ ನಿರ್ಮಿಸಿ, ಅದರ ಪೂರ್ವಭಾಗದ ಗದ್ದೆ ಜಮೀನನ್ನು ಇರುಮಡಿನಾಡಿನ ನಿಗರಿಲಿಚೋಳ ಮಂಡಲದ ಹಿರಿಯ ಸಾದಲಿ ಗ್ರಾಮದ ಈಶ್ವರ ದೇವಾಲಯಕ್ಕೆ ಈಶ್ವರ ದೇವಾಲಯಕ್ಕೆ ಮತ್ತು ಹದಿನಾರು ಬ್ರಾಹ್ಮಣರಿಗೆ ದಾನವಾಗಿ ನೀಡಿದ ಕುರಿತು ಉಲ್ಲೇಖಿಸಲಾಗಿದೆ.
ಶಾಸನ ತಜ್ಞ ಕೆ.ಆರ್. ನರಸಿಂಹನ್ ವಿವರಿಸುತ್ತಾ, “ಈ ಶಾಸನವು ಚೋಳರ ಕಾಲದ ವ್ಯಾಪಾರ ಸಂಘಟನೆಗಳು, ಆಡಳಿತ ವಿಭಾಗಗಳು ಮತ್ತು ಸಾದಲಿಯ ಈಶ್ವರ ದೇವಾಲಯದ ನಿರ್ಮಾಣ ಇತಿಹಾಸದ ಕುರಿತು ಮಹತ್ವದ ಮಾಹಿತಿಯನ್ನು ನೀಡುತ್ತದೆ,” ಎಂದರು.
ಇತಿಹಾಸದ ಮಹತ್ವ:
ವಿಶೇಷವೆಂದರೆ, ಕುಲೋತ್ತುಂಗ ಚೋಳರಾಜ್ಯದ ಚಕ್ರವರ್ತಿ ಆದರೂ ಕೂಡ ಮೂಲದಲ್ಲಿ ಆತ ಪ್ರಖ್ಯಾತ ಕನ್ನಡ ಅರಸ ಇಮ್ಮಡಿ ಪುಲಿಕೇಶಿಯ ವಂಶದವನು. ಚಾಲುಕ್ಯರ ಪುಲಿಕೇಶಿಯು ತನ್ನ ತಮ್ಮನಾದ ಕುಬ್ಜ ವಿಷ್ಣುವರ್ಧನನಿಗೆ ವೆಂಗಿ ರಾಜ್ಯವನ್ನು ಗೆದ್ದುಕೊಟ್ಟಿರುತ್ತಾನೆ. ಆ ವೆಂಗಿಚಾಲುಕ್ಯವಂಶದ ರಾಜನರೇಂದ್ರನ ಮಗನೇ ಈ ಕುಲೋತುಂಗ. ಚೋಳ ವಂಶದ ರಾಜೇಂದ್ರ ಚೋಳನ ಮಗಳ ಮಗನಾದ್ದರಿಂದ ಇವನಿಗೆ ಅನಿವಾರ್ಯ ಸಂದರ್ಭದಲ್ಲಿ ಚೋಳ ಸಿಂಹಾಸನ ಏರುವ ಅವಕಾಶ ಸಿಕ್ಕಿರುತ್ತದೆ.
ಮತ್ತೊಂದು ವಿಶೇಷವೆಂದರೆ, ಹೊಯ್ಸಳರ ವಿಷ್ಣುವರ್ಧನ ಚೋಳರನ್ನು ಕನ್ನಡನಾಡಿನಿಂದ ಹೊರದಬ್ಬಿದ ನಂತರವೂ ಕುಲೋತ್ತುಂಗ ಮತ್ತು ಆತನ ಮಗ ವಿಕ್ರಮಚೋಳನ ಶಾಸನಗಳು ಶಿಡ್ಲಘಟ್ಟ ತಾಲ್ಲೂಕಿನ ನಂದನವನ, ಚಿಲಕಲನೇರ್ಪು ಮತ್ತು ಸುಗಟೂರುಗಳಲ್ಲಿ ಸಿಕ್ಕಿವೆ, ಎಸ್.ದೇವಗಾನಹಳ್ಳಿ ಶಾಸನವೂ ಅದೇ ರೀತಿಯದಾಗಿರುವುದರಿಂದ ಅದಕ್ಕೆ ಐತಿಹಾಸಿಕ ಮಹತ್ವವಿದೆ.
ಶಾಸನವನ್ನು ಪತ್ತೆಹಚ್ಚುವ ಕಾರ್ಯದಲ್ಲಿ ಡಿ.ವಿ. ಓಬಳಪ್ಪ, ಡಿ.ವಿ. ರಮೇಶ್, ನರಸಿಂಹಪ್ಪ, ಗಂಗರಾಜ, ಹಂಸದ್, ಸಂಜಯ್, ಸೀನಪ್ಪ, ವೆಂಕಟರಮಣಪ್ಪ, ಸಂಶೋಧನಾ ವಿದ್ಯಾರ್ಥಿ ಶ್ರೀನಿವಾಸ್ ಮತ್ತು ಕೃಷ್ಣಗಿರಿಯ ಗೋವಿಂದರಾಜ್ ಅವರ ಸಹಕಾರವಿದೆ.
For Daily Updates WhatsApp ‘HI’ to 7406303366
