Sadali, Sidlaghatta, chikkaballapur : ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಬಳಿಯ ರಾಮಸಮುದ್ರ ಕೆರೆ ತುಂಬಿ ಕೋಡಿ ಹರಿಯುತ್ತಿರುವುದರಿಂದ, ಕೋಡಿ ಹರಿವ ಭಾಗದಲ್ಲಿ ಸ್ಥಳೀಯರ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕ ಬಿ.ಎನ್. ರವಿಕುಮಾರ್ ಅವರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ಜನರ ಅಹವಾಲುಗಳನ್ನು ಆಲಿಸಿ ಪರಿಹಾರ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಕೆರೆ ತುಂಬಿದ ಪರಿಣಾಮವಾಗಿ ರಸ್ತೆಗಳಲ್ಲಿ ನೀರು ತುಂಬಿ, ಸುತ್ತಮುತ್ತಲಿನ ಹೊಲಗದ್ದೆ, ತೋಟ ಪ್ರದೇಶಗಳಿಗೆ ಹೋಗುವ ದಾರಿಗಳು ಮುಚ್ಚಿಹೋಗಿವೆ. ಇದರ ಪರಿಣಾಮವಾಗಿ ಕೃಷಿ ಮತ್ತು ಹೈನುಗಾರಿಕೆ ಚಟುವಟಿಕೆಗಳು ಅಸ್ತವ್ಯಸ್ತಗೊಂಡಿವೆ ಎಂದು ಸ್ಥಳೀಯರು ಶಾಸಕರಿಗೆ ಮನವಿ ಮಾಡಿದರು.
ಹರಿಯುತ್ತಿರುವ ನೀರು ಆಂಧ್ರಪ್ರದೇಶದ ಕಡೆ ವ್ಯರ್ಥವಾಗಿ ಹರಿಯುತ್ತಿದೆ ಎಂಬ ಮಾಹಿತಿ ನೀಡಿ, ನೀರನ್ನು ತಡೆದು ಸ್ಥಳೀಯರ ಉಪಯೋಗಕ್ಕೆ ಬಳಸುವಂತೆ ಮನವಿ ಮಾಡಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ರವಿಕುಮಾರ್ ಅವರು, “ಸ್ಥಳೀಯರ ಸಂಚಾರಕ್ಕೆ ಅಡ್ಡಿಯಾಗದಂತೆ ನೀರಿನ ಕಾಲುವೆ ಭಾಗದಲ್ಲಿ ಮೋರಿ ಅಥವಾ ಸೇತುವೆ ನಿರ್ಮಿಸಲು ಸಾಧ್ಯತೆ ಪರಿಶೀಲಿಸಿ ಕ್ರಮ ಕೈಗೊಳ್ಳಿ” ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಇದೇ ವೇಳೆ ಸಾದಲಿ ಕ್ರಾಸ್‌ನಿಂದ ಎಸ್.ದೇವಗಾನಹಳ್ಳಿವರೆಗಿನ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ಧೂಳು ಸಮಸ್ಯೆಯಿಂದ ಹೊಲಗಳಲ್ಲಿ ಬೆಳೆ ಹಾನಿಯಾಗುತ್ತಿದೆ ಮತ್ತು ಪ್ರಯಾಣಿಕರಿಗೂ ತೊಂದರೆ ಆಗುತ್ತಿದೆ ಎಂದು ಸಾರ್ವಜನಿಕರು ದೂರಿದರು. ಶಾಸಕರಾದ ರವಿಕುಮಾರ್ ಅವರು ಲೊಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡುವಂತೆ ಸೂಚಿಸಿದರು.
ಹಕ್ಕಿ ಪಿಕ್ಕಿ ಕಾಲೋನಿ ಮತ್ತು ಸರ್ಕಾರದಿಂದ ನೀಡಲಾದ ನಿವೇಶನಗಳ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕದ ಸಮಸ್ಯೆ ಉಂಟಾಗಿದೆ ಎಂದು ಸ್ಥಳೀಯರು ತಿಳಿಸಿದರು. ಶಾಸಕರು ಈ ವಿಷಯವನ್ನು ಕೂಡ ಅಧಿಕಾರಿಗಳ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ತಾದೂರು ರಘು, ತ್ಯಾಗರಾಜ್, ಆವುಲರೆಡ್ಡಿ, ಗಂಗಾಧರ್, ಆಂಜಿನಪ್ಪ, ಲೊಕೋಪಯೋಗಿ, ಸಣ್ಣ ನೀರಾವರಿ, ಬೆಸ್ಕಾಂ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸ್ಥಳೀಯರು ಹಾಜರಿದ್ದರು.
For Daily Updates WhatsApp ‘HI’ to 7406303366
