
Sidlaghatta : ಶಿಡ್ಲಘಟ್ಟ ನಗರದ ಇಲಾಹಿ ನಗರದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಮಹಿಳೆಯ ಮೇಲೆ ಹಲ್ಲೆ ನಡೆಸಿ ಭರ್ಜರಿ ದರೋಡೆ ಮಾಡಿದ್ದ ಪ್ರಕರಣವನ್ನು ಶಿಡ್ಲಘಟ್ಟ ಪೊಲೀಸರು ಭೇದಿಸಿದ್ದಾರೆ. ದರೋಡೆಕೋರರಿಂದ ಸುಮಾರು ₹60 ಲಕ್ಷ ಮೌಲ್ಯದ 451 ಗ್ರಾಂ ಚಿನ್ನಾಭರಣ ಹಾಗೂ 819 ಗ್ರಾಂ ಬೆಳ್ಳಿಯನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸ್ ತಂಡ ಯಶಸ್ವಿಯಾಗಿದೆ.
ಬಂಧಿತ ಆರೋಪಿಗಳನ್ನು ನಗರದ ಫಿಲಚೇಚರ್ ಕ್ವಾಟ್ರಸ್ ನಿವಾಸಿಗಳಾದ ಶಾರುಖ್ ಪಾಷ (25), ಸಾಹಿಲ್ ಪಾಷ (24) ಹಾಗೂ ಇನಾಯತ್ ಪಾಷ (54) ಎಂದು ಗುರುತಿಸಲಾಗಿದೆ. ವಿಶೇಷವೆಂದರೆ, ಬಂಧಿತರಲ್ಲಿ ಒಬ್ಬನಾದ ಸಾಹಿಲ್ ಪಾಷ ದರೋಡೆಗೊಳಗಾದ ಮುಬಾರಕ್ ಅವರ ಸ್ವಂತ ತಮ್ಮನ ಮಗನೇ ಆಗಿದ್ದಾನೆ.
ಘಟನೆಯ ಹಿನ್ನೆಲೆ: ಡಿಸೆಂಬರ್ 10ರಂದು ರಾತ್ರಿ ಮುಬಾರಕ್ ಅವರನ್ನು ಸಾಹಿಲ್ ಅವರೇ ಮನೆಯ ಬಳಿ ಬಿಟ್ಟು ಹೋಗಿದ್ದರು. ಆದರೆ, ಮುಬಾರಕ್ ಮನೆಯೊಳಗೆ ಹೋಗುತ್ತಿದ್ದಂತೆ, ಅದಕ್ಕೂ ಮೊದಲೇ ಮುಸುಕು ಧರಿಸಿ ಮನೆಯೊಳಗೆ ಅಡಗಿದ್ದ ಆರೋಪಿಗಳು ಅವರ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು. ನಂಬಿಕಸ್ಥನೇ ದರೋಡೆಗೆ ಸಂಚು ರೂಪಿಸಿದ್ದ ವಿಚಾರ ಈಗ ತನಿಖೆಯಿಂದ ಬಹಿರಂಗವಾಗಿದೆ.
ಪೊಲೀಸ್ ಕಾರ್ಯಾಚರಣೆ: ಪ್ರಕರಣ ದಾಖಲಾದ ಕೂಡಲೇ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ ಅವರ ಮಾರ್ಗದರ್ಶನದಲ್ಲಿ, ಸಿಪಿಐ ಆನಂದ್ ಕುಮಾರ್ ನೇತೃತ್ವದ ವಿಶೇಷ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಕೇವಲ ಕೆಲವೇ ದಿನಗಳಲ್ಲಿ ಕಳವು ಮಾಲನ್ನು ಪತ್ತೆ ಹಚ್ಚಿದ ತನಿಖಾ ತಂಡದ ಕಾರ್ಯಕ್ಷಮತೆಯನ್ನು ಎಸ್ಪಿ ಕುಶಲ್ ಚೌಕ್ಸೆ ಶ್ಲಾಘಿಸಿದ್ದಾರೆ.