
Sidlaghatta : ಶಿಡ್ಲಘಟ್ಟ ನಗರದ ಅಂಜನಿ ಬಡಾವಣೆಯಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ನಡೆಯುತ್ತಿದ್ದ ಗ್ಯಾಸ್ ರೀಫಿಲಿಂಗ್ (Illegal Gas Refilling) ಅಡ್ಡದ ಮೇಲೆ ಶಿಡ್ಲಘಟ್ಟ ನಗರ ಪೊಲೀಸರು ದಾಳಿ ನಡೆಸಿ, ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ವೇಣುಗೋಪಾಲ್ ಎಂ ಮತ್ತು ತಂಡವು ಈ ಕಾರ್ಯಾಚರಣೆ ನಡೆಸಿದೆ.
ಗುರುವಾರ ಮಧ್ಯಾಹ್ನ ನಗರದ ಅಂಜನಿ ಬಡಾವಣೆಯ ವಾರ್ಡ್ ನಂ. 1 ರಲ್ಲಿರುವ ಮಂಜುನಾಥ ಎಂಬುವರ ಸ್ವತ್ತಿನಲ್ಲಿದ್ದ ಆಟೋ ಮೊಬೈಲ್ ಅಂಗಡಿಯೊಂದರಲ್ಲಿ ಅಕ್ರಮವಾಗಿ ಗ್ಯಾಸ್ ತುಂಬಿಸುವ ಕೆಲಸ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು, ಲಕ್ಕಹಳ್ಳಿ ಗ್ರಾಮದ ನಿವಾಸಿ ಗೋಪಾಲ್ (43) ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ.
ದಾಳಿಯ ವೇಳೆ 24 ಗ್ಯಾಸ್ ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳಲ್ಲಿ ಇಂಡೇನ್ ಕಂಪನಿಯ 16 ತುಂಬಿದ ಮತ್ತು 4 ಖಾಲಿ ಸಿಲಿಂಡರ್‌ಗಳು, ಭಾರತ್ ಕಂಪನಿಯ 4 ತುಂಬಿದ ಸಿಲಿಂಡರ್‌ಗಳು ಹಾಗೂ 2 ಸಣ್ಣ ಖಾಲಿ ಸಿಲಿಂಡರ್‌ಗಳು ಸೇರಿವೆ. ಇದಲ್ಲದೆ, ಗ್ಯಾಸ್ ರೀಫಿಲಿಂಗ್‌ಗೆ ಬಳಸುತ್ತಿದ್ದ ತೂಕದ ಯಂತ್ರ, ರೀಫಿಲಿಂಗ್ ಮೋಟಾರ್, ಗ್ಯಾಸ್ ಕನೆಕ್ಟಿಂಗ್ ಪೈಪ್‌ಗಳು ಮತ್ತು ಒಂದು ಬಜಾಜ್ ಆಟೋವನ್ನು ಪೊಲೀಸರು ಅಮಾನತ್ತುಪಡಿಸಿಕೊಂಡಿದ್ದಾರೆ. ಆರೋಪಿ ಗೋಪಾಲ್ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.