Home News ಶಾರ್ಟ್ ಸರ್ಕ್ಯೂಟ್‌ನಿಂದ ರೇಷ್ಮೆ ಶೆಡ್‌ಗೆ ಬೆಂಕಿ; 250 ಚಂದ್ರಂಕಿಗಳು ಭಸ್ಮ

ಶಾರ್ಟ್ ಸರ್ಕ್ಯೂಟ್‌ನಿಂದ ರೇಷ್ಮೆ ಶೆಡ್‌ಗೆ ಬೆಂಕಿ; 250 ಚಂದ್ರಂಕಿಗಳು ಭಸ್ಮ

0
Accidental Fire due to Short Circuit

Doddadasarahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಕಸಬಾ ಹೋಬಳಿಯ ದೊಡ್ಡದಾಸರಹಳ್ಳಿ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ (Short Circuit) ರೇಷ್ಮೆ ಚಂದ್ರಂಕಿಯ ಶೆಡ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ, ಸುಮಾರು 250ಕ್ಕೂ ಹೆಚ್ಚು ರೇಷ್ಮೆ ಚಂದ್ರಂಕಿಗಳು ಸುಟ್ಟು ಕರಕಲಾಗಿರುವ ಘಟನೆ ಬುಧವಾರ ರಾತ್ರಿ ಸಂಭವಿಸಿದೆ. ಗ್ರಾಮದ ರೈತ ವೆಂಕಟಸ್ವಾಮಿ ಅವರಿಗೆ ಸೇರಿದ ಶೆಡ್‌ನಲ್ಲಿ ಈ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ಹಾನಿಯಾಗಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕರು, BESCOM ಅಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಕಸಬಾ ರಾಜಸ್ವ ನಿರೀಕ್ಷಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾನಿಯ ಬಗ್ಗೆ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಿ, ವಿಪತ್ತು ನಿರ್ವಹಣಾ ಅಧಿನಿಯಮದಡಿ (Disaster Management Act) ಸಂತ್ರಸ್ತ ರೈತನಿಗೆ ಶೀಘ್ರವಾಗಿ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ರೈತನಿಗೆ ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್ ಮಾತನಾಡಿ, “ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಬರುವ ಸಮಯದಲ್ಲಿ ರೈತನಿಗೆ ಇಂತಹ ಆಪತ್ತು ಬಂದಿರುವುದು ದುರದೃಷ್ಟಕರ. ಸರ್ಕಾರವು ಕೂಡಲೇ ರೈತ ವೆಂಕಟಸ್ವಾಮಿ ಅವರಿಗೆ 2 ಲಕ್ಷ ರೂಪಾಯಿಗಳ ವಿಶೇಷ ಪರಿಹಾರ ನೀಡಬೇಕು. ಪ್ರಸ್ತುತ ಜಾರಿಯಲ್ಲಿರುವ ಆಪತ್ತು ನಿರ್ವಹಣಾ ಪರಿಹಾರಧನ ತೀರಾ ಕಡಿಮೆಯಿದ್ದು, ಅದನ್ನು ಹೆಚ್ಚಿಸಬೇಕು ಹಾಗೂ ನಷ್ಟ ಸಂಭವಿಸಿದ 7 ದಿನಗಳ ಒಳಗಾಗಿ ಪರಿಹಾರ ವಿತರಿಸಬೇಕು” ಎಂದು ಒತ್ತಾಯಿಸಿದರು. ಈ ವೇಳೆ ಗ್ರಾಮದ ಮುಖಂಡರಾದ ದೇವರಾಜ್, ಮಂಜುನಾಥ್ ಹಾಗೂ ನೊಂದ ರೈತ ವೆಂಕಟಸ್ವಾಮಿ ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version