
Sidlaghatta : ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಪಲ್ಸ್ ಪೋಲಿಯೊ (Pulse Polio) ಅಭಿಯಾನಕ್ಕೆ ಭರ್ಜರಿ ಚಾಲನೆ ದೊರೆತಿದ್ದು, ಮೊದಲ ದಿನವೇ ಶೇ 93.24 ರಷ್ಟು ಪ್ರಗತಿ ದಾಖಲಾಗಿದೆ. ತಾಲ್ಲೂಕಿನಾದ್ಯಂತ ಐದು ವರ್ಷದೊಳಗಿನ ಮಕ್ಕಳಿಗೆ ಪೋಲಿಯೊ ಹನಿ ಹಾಕುವ ಮೂಲಕ ಪೋಲಿಯೊ ಮುಕ್ತ ಸಮಾಜ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಲಾಯಿತು.
ತಾಲ್ಲೂಕಿನ ತಾತಹಳ್ಳಿಯ ಅಂಗನವಾಡಿ ಕೇಂದ್ರದಲ್ಲಿ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಿದ ಶಾಸಕ ಬಿ.ಎನ್.ರವಿಕುಮಾರ್ ಮಾತನಾಡಿ, “ಮಕ್ಕಳಿಗೆ ನಾವು ನೀಡಬಹುದಾದ ಅತ್ಯಂತ ದೊಡ್ಡ ಆಸ್ತಿ ಎಂದರೆ ಅದು ಉತ್ತಮ ಆರೋಗ್ಯ. ಆರೋಗ್ಯವಂತ ಮಕ್ಕಳಿಂದ ಮಾತ್ರ ಬಲಿಷ್ಠ ದೇಶವನ್ನು ಕಟ್ಟಲು ಸಾಧ್ಯ. ಹೀಗಾಗಿ ಪ್ರತಿ ಮಗುವಿಗೂ ಪೋಲಿಯೊ ಲಸಿಕೆ ಹಾಕಿಸುವುದು ಪ್ರತಿ ಪೋಷಕರ ಕರ್ತವ್ಯ,” ಎಂದು ತಿಳಿಸಿದರು. ಸರ್ಕಾರದ ಈ ಜನಪರ ಕಾರ್ಯಕ್ರಮಕ್ಕೆ ಸಾರ್ವಜನಿಕರು ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.
ಸಾಧನೆಯ ಅಂಕಿ-ಅಂಶಗಳು: ತಾಲ್ಲೂಕು ಮಟ್ಟದ ಗುರಿಯಲ್ಲಿ ಮೊದಲ ದಿನ ಉತ್ತಮ ಸಾಧನೆಯಾಗಿದೆ. ನಗರ ಭಾಗದಲ್ಲಿ ಶೇ 80.94 ರಷ್ಟು ಪ್ರಗತಿಯಾಗಿದ್ದರೆ, ಗ್ರಾಮಾಂತರ ಭಾಗದಲ್ಲಿ ಶೇ 98.34 ರಷ್ಟು ಗುರಿ ಮುಟ್ಟಲಾಗಿದೆ. ಒಟ್ಟಾರೆಯಾಗಿ ತಾಲ್ಲೂಕಿನಲ್ಲಿ ಶೇ 93.24 ರಷ್ಟು ಮಕ್ಕಳಿಗೆ ಲಸಿಕೆ ನೀಡಲಾಗಿದೆ.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಮೂರ್ತಿ ಮಾತನಾಡಿ, “ಪಲ್ಸ್ ಪೋಲಿಯೊ ಅಭಿಯಾನವು ಒಟ್ಟು ಮೂರು ದಿನಗಳ ಕಾಲ ನಡೆಯಲಿದೆ. ಭಾನುವಾರ ಕೇಂದ್ರಗಳಲ್ಲಿ ಲಸಿಕೆ ನೀಡಲಾಗಿದ್ದು, ಸೋಮವಾರ ಮತ್ತು ಮಂಗಳವಾರ ನಮ್ಮ ಆರೋಗ್ಯ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಲಿದ್ದಾರೆ. ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ಎಚ್ಚರಿಕೆ ವಹಿಸಲಾಗುವುದು,” ಎಂದು ಮಾಹಿತಿ ನೀಡಿದರು.