
Basavapatna, Sidlaghatta : ಮೃತಪಟ್ಟ ವ್ಯಕ್ತಿಯ ಹೆಸರು ಮತ್ತು ವಿಳಾಸ ಇರುವ ಆಧಾರ್ ಕಾರ್ಡ್ ಇನ್ನಿತರೆ ದಾಖಲೆಗಳನ್ನು ಸೃಷ್ಟಿಸಿ ತಾನೇ ಆ ವ್ಯಕ್ತಿ ಎಂದು ನಂಬಿಸಿ ಮೃತ ವ್ಯಕ್ತಿಯ ಹೆಸರಲ್ಲಿದ್ದ ಎರಡು ಎಕರೆ ಜಮೀನನ್ನು ಅಕ್ರಮವಾಗಿ ಮಾರಾಟ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ತಾಲ್ಲೂಕಿನ ಬಸವಾಪಟ್ಟಣ ಗ್ರಾಮದ ಚನ್ನಕೇಶವ ಎಂಬಾತ ತಾನು ನಾರಾಯಣಪ್ಪ ಎಂದು ಆಧಾರ್ ಕಾರ್ಡ್ ಸೇರಿದಂತೆ ಇತರೆ ದಾಖಲೆಗಳನ್ನು ಸೃಷ್ಟಿಸಿ ಅದೇ ಗ್ರಾಮದ 26 ವರ್ಷಗಳ ಹಿಂದೆಯೆ ಮೃತಪಟ್ಟ ನಾರಾಯಣಪ್ಪ ಬಿನ್ ನಾಗಪ್ಪ ಎಂಬುವವರ ಹೆಸರಲ್ಲಿರುವ 2 ಎಕರೆ ಜಮೀನನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾನೆ.
ಚಿಂತಾಮಣಿ ತಾಲ್ಲೂಕು ಉಪ ನೋಂದಣಿ ಕಚೇರಿಯಲ್ಲಿ ಈ ಅಕ್ರಮ ನೋಂದಣಿ ನಡೆದಿದೆ. ಅಕ್ರಮವಾಗಿ ದಾಖಲೆಗಳನ್ನು ಸೃಷ್ಟಿಸಿ ಜಮೀನು ಮಾರಾಟ ಮಾಡಿದ ಚನ್ನಕೇಶವ, ಆತನ ಪತ್ನಿ, ಪುತ್ರಿ, ಪುತ್ರ ಮತ್ತು ನೋಂದಣಿ ಸಮಯದಲ್ಲಿ ಸಾಕ್ಷಿಗಳಾಗಿ ಸಹಿ ಹಾಕಿದ ಇಬ್ಬರ ಮೇಲೆ ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆ.ಐ.ಎ.ಡಿ.ಬಿ ವ್ಯಾಪ್ತಿಗೆ ಒಳಪಡುವ ಈ ಜಮೀನುಗಳನ್ನು ಮಾರಾಟ ಮಾಡುವುದಾಗಲೀ, ಕೊಳ್ಳುವುದಾಗಲೀ ಮಾಡಬಾರದೆಂಬ ಸೂಚನೆಯಿದ್ದರೂ ಅಕ್ರಮವಾಗಿ ಈ ಜಮೀನಿನ ಮಾರಾಟ ನಡೆದಿದೆ.
ಹಿನ್ನೆಲೆ :
ಬಸವಾಪಟ್ಟಣ ಗ್ರಾಮದ ವಾಸಿ ನಾರಾಯಣಪ್ಪ ಬಿನ್ ನಾಗಪ್ಪ ಕಳೆದ 26 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಅವರ ಹೆಸರಲ್ಲಿ ಸರ್ವೆ ನಂಬರ್ 93ರಲ್ಲಿ 2 ಎಕರೆ ಜಮೀನು ಇತ್ತು. ಇದೇ ಗ್ರಾಮದ ವಾಸಿ ಚನ್ನಕೇಶವ ಬಿನ್ ನಾರಾಯಣಪ್ಪ ಎಂಬಾತ ತಾನೇ ನಾರಾಯಣಪ್ಪ ಎಂಬುದಾಗಿ ಆಧಾರ್ ಕಾರ್ಡ್ ಮತ್ತಿತರೆ ದಾಖಲೆಗಳನ್ನು ಸೃಷ್ಟಿಸಿದ್ದಾನೆ.
ಚಿಂತಾಮಣಿ ತಾಲ್ಲೂಕು ಉಪ ನೋಂದಣಾಕಾರಿ ಕಚೇರಿಯಲ್ಲಿ ನಾರಾಯಣಪ್ಪ ಬಿನ್ ನಾಗಪ್ಪ ಅವರ ಸರ್ವೆ ನಂಬರ್ 93 ರಲ್ಲಿನ 2 ಎಕರೆ ಜಮೀನನ್ನು ಬೆಂಗಳೂರು ವಾಸಿಯೊಬ್ಬರಿಗೆ ಮಾರಾಟ ಮಾಡಿದ್ದಾನೆ.
ಅಕ್ರಮವಾಗಿ ಜಮೀನು ಮಾರಾಟ ಮಾಡಿದ ಬಗ್ಗೆ ನಾರಾಯಣಪ್ಪ ಅವರ ಕುಟುಂಬದವರಿಗೆ ವಿಷಯ ತಿಳಿದು ಬಂದಿದ್ದು ಕೂಡಲೆ ಚನ್ನಕೇಶವ ಅವರ ಚನ್ನಕೇಶವ ಎಂದು ಹೆಸರು ಇರುವ ಮೂಲ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಇನ್ನಿತರೆ ದಾಖಲೆಗಳನ್ನು ಹಾಗೂ ಚನ್ನಕೇಶವ ತಾನೇ ನಾರಾಯಣಪ್ಪ ಎಂದು ಸೃಷ್ಟಿಸಿರುವ ದಾಖಲೆಗಳನ್ನು ಸಂಗ್ರಹಿಸಿ ನೋಂದಣಿ ಕಚೇರಿ ಮತ್ತು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.