
Sidlaghatta : ಶಿಡ್ಲಘಟ್ಟ ನಗರದ ಟಿ.ಬಿ. ರಸ್ತೆಯ ಫುಟ್ ಪಾತ್ ಒತ್ತುವರಿ ಮಾಡಿಕೊಂಡು ವ್ಯಾಪಾರ ನಡೆಸುತ್ತಿದ್ದ ಕೆಲ ವ್ಯಾಪಾರಸ್ಥರಿಗೆ ನಗರ ಠಾಣೆ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (PSI) ಸುನಿಲ್ ಕುಮಾರ್ ಬುಧವಾರ ಸಂಜೆ ಒತ್ತುವರಿ ಸಂಪೂರ್ಣ ತೆರವುಗೊಳಿಸುವಂತೆ ಸೂಚಿಸಿ, ಮರುಕಳಿಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಈ ಹಿಂದೆ ಅಂಗಡಿ ಮಾಲೀಕರಿಗೆ ಎರಡು ದಿನಗಳ ಗಡುವು ನೀಡಲಾಗಿತ್ತು. ಅದರಂತೆ ಕೆಲ ವ್ಯಾಪಾರಸ್ಥರು ಅಂಗಡಿಗಳ ಮುಂಭಾಗದಲ್ಲಿ ಇಟ್ಟಿದ್ದ ಸಾಮಗ್ರಿಗಳನ್ನು ತೆರವುಗೊಳಿಸಿ ಪಾದಚಾರಿಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಆದರೆ ಕೆಲ ಅಂಗಡಿಗಳ ಮುಂಭಾಗದಲ್ಲಿ ಫುಟ್ ಪಾತ್ ಮೇಲೆ ಸಾಮಗ್ರಿಗಳನ್ನು ಇಟ್ಟು ವ್ಯಾಪಾರ ನಡೆಸುತ್ತಿರುವುದು ಮುಂದುವರಿದಿದೆ.
ಈ ಹಿನ್ನೆಲೆಯಲ್ಲಿ ನಗರ ಠಾಣೆಯ ಪಿಎಸ್‌ಐ ಸುನಿಲ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ಬುಧವಾರ ಸಂಜೆ ಟಿ.ಬಿ. ರಸ್ತೆಯಲ್ಲಿ ಪರಿಶೀಲನೆ ನಡೆಸಿದರು. ಫುಟ್ ಪಾತ್ ಮೇಲಿನ ಒತ್ತುವರಿಯನ್ನು ಸಂಪೂರ್ಣವಾಗಿ ತೆರವುಗೊಳಿಸುವಂತೆ ವ್ಯಾಪಾರಸ್ಥರಿಗೆ ಸೂಚಿಸಿದರು. ಮತ್ತೆ ಒತ್ತುವರಿ ಮಾಡಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಫುಟ್ ಪಾತ್ ಒತ್ತುವರಿಯಿಂದ ಪಾದಚಾರಿಗಳು ರಸ್ತೆಯಲ್ಲಿಯೇ ಸಂಚರಿಸುವಂತಾಗಿದ್ದು, ಇದರಿಂದ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗುತ್ತಿದೆ. ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರದ ದೃಷ್ಟಿಯಿಂದ ಫುಟ್ ಪಾತ್ ಗಳನ್ನು ಮುಕ್ತಗೊಳಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ಒತ್ತುವರಿ ತೆರವುಗೊಳಿಸಿ ಸಹಕರಿಸಬೇಕು ಎಂದು ಮನವಿ ಮಾಡಿದ್ದು, ಅಗತ್ಯವಿರುವ ಕಡೆ ನಗರಸಭೆಯ ಸಹಕಾರದೊಂದಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
In English: Sidlaghatta town police warned T.B. Road shopkeepers who continued encroaching on footpaths despite an earlier two-day notice, ordering them to fully clear the encroachment or face legal action. Police said the move follows pedestrian safety and traffic concerns, and urged voluntary compliance, with municipal council support to follow where needed.
ಈ ಹಿಂದೆ ನೀಡಲಾಗಿದ್ದ ಫುಟ್ ಪಾತ್ ಒತ್ತುವರಿ ತೆರವಿಗೆ ಎರಡು ದಿನ ಗಡುವು ಕುರಿತ ವರದಿಯನ್ನೂ ನೋಡಿ.