
Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಬಸವಪಟ್ಟಣ, ತಾದೂರು ಹಾಗೂ ತೊಟ್ಲಗಾನಹಳ್ಳಿ ಗ್ರಾಮಗಳ ಸುತ್ತಮುತ್ತ ಮತ್ತೆ ಅಕ್ರಮವಾಗಿ ಮಣ್ಣು ಅಗೆದು ಸಾಗಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಜೆಸಿಬಿ ಯಂತ್ರಗಳ ಮೂಲಕ ಮಣ್ಣು ತೆಗೆಯಲಾಗುತ್ತಿದ್ದು, ಟಿಪ್ಪರ್ ಗಳ ಮೂಲಕ ನಿರಂತರವಾಗಿ ಸಾಗಿಸಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಈ ಹಿಂದೆ ತಾಲ್ಲೂಕಿನ ವಿವಿಧೆಡೆ ನಡೆಯುತ್ತಿದ್ದ ಅಕ್ರಮ ಮಣ್ಣು ಗಣಿಗಾರಿಕೆ ಕುರಿತು ವರದಿ ಪ್ರಕಟವಾಗಿತ್ತು. ವರದಿ ಬಳಿಕ ಕೆಲಕಾಲ ಸ್ಥಗಿತಗೊಂಡಿದ್ದ ಮಣ್ಣು ಅಗೆತ ಹಾಗೂ ಸಾಗಾಟ ಇದೀಗ ಮತ್ತೆ ಆರಂಭವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಬಸವಪಟ್ಟಣ, ತಾದೂರು ಹಾಗೂ ತೊಟ್ಲಗಾನಹಳ್ಳಿ ಗ್ರಾಮಗಳ ಸಮೀಪವೇ ಜೆಸಿಬಿಗಳ ಮೂಲಕ ಮಣ್ಣು ತೆಗೆಯಲಾಗುತ್ತಿದ್ದು, ಟಿಪ್ಪರ್‌ಗಳಲ್ಲಿ ಸಾಗಿಸಲಾಗುತ್ತಿದೆ ಎನ್ನಲಾಗಿದೆ. ಗ್ರಾಮಗಳ ವ್ಯಾಪ್ತಿಯಲ್ಲಿ ಇಂತಹ ಚಟುವಟಿಕೆ ನಡೆಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನಹರಿಸುತ್ತಿಲ್ಲವೇ ಎಂಬ ಪ್ರಶ್ನೆ ಸ್ಥಳೀಯರಲ್ಲಿ ಮೂಡಿದೆ.
ಮಣ್ಣು ತೆಗೆಯಲು ಹಾಗೂ ಸಾಗಿಸಲು ಅಗತ್ಯ ಅನುಮತಿ ಮತ್ತು ದಾಖಲೆಗಳಿವೆಯೇ ಎಂಬುದು ಸ್ಪಷ್ಟವಾಗಿಲ್ಲ. ಅನುಮತಿ ಇಲ್ಲದೆ ಮಣ್ಣು ತೆಗೆಯಲಾಗುತ್ತಿದ್ದರೆ ಸರ್ಕಾರದ ರಾಜಸ್ವಕ್ಕೆ ನಷ್ಟ ಉಂಟಾಗುವುದರ ಜತೆಗೆ, ಕೃಷಿ ಭೂಮಿ ಹಾಗೂ ಪರಿಸರದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಸಂಬಂಧಪಟ್ಟ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಮಣ್ಣು ತೆಗೆಯಲು ಅನುಮತಿ ನೀಡಲಾಗಿದೆಯೇ, ಯಾವ ಜಾಗದಲ್ಲಿ ಎಷ್ಟು ಪ್ರಮಾಣದ ಮಣ್ಣು ತೆಗೆಯಲು ಅವಕಾಶವಿದೆ, ಸಾಗಿಸಲಾಗುತ್ತಿರುವ ಮಣ್ಣಿಗೆ ಸಂಬಂಧಿಸಿದ ದಾಖಲೆಗಳಿವೆಯೇ ಎಂಬುದನ್ನು ಪರಿಶೀಲಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಅಧಿಕಾರಿಗಳ ಕಣ್ಮುಂದೆಯೇ ಇಂತಹ ಚಟುವಟಿಕೆಗಳು ನಡೆಯುತ್ತಿದ್ದರೆ ಇದರ ಹಿಂದೆ ಯಾರ ಪ್ರಭಾವವಿದೆ? ಸಂಬಂಧಪಟ್ಟ ಅಧಿಕಾರಿಗಳು ಏಕೆ ಕ್ರಮ ಕೈಗೊಂಡಿಲ್ಲ? ಎಂಬ ಪ್ರಶ್ನೆಗಳೂ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.
ಅನುಮತಿ ಇದೆಯೇ?
ಹೋರಾಟದ ಸಂದರ್ಭ ಬಳಸಿಕೊಂಡು ದಂಧೆ ಪುನರಾರಂಭ
“ನಾವು ಕೆ.ಐ.ಡಿ.ಬಿ.ಐ ಹೋರಾಟದಲ್ಲಿದ್ದೇವೆ. ತಾಲ್ಲೂಕು ಆಡಳಿತದ ಅಧಿಕಾರಿಗಳು ಎಸ್.ಐ.ಆರ್ ಕೆಲಸದಲ್ಲಿ ನಿರತರಾಗಿದ್ದಾರೆ. ಈ ಸಂದರ್ಭವನ್ನು ಬಳಸಿಕೊಂಡು ಮತ್ತೊಮ್ಮೆ ಮಣ್ಣಿನ ಅಕ್ರಮ ಸಾಗಾಟ ಪ್ರಾರಂಭವಾಗಿದೆ. ಇದನ್ನು ರೈತ ಸಂಘ ತೀವ್ರವಾಗಿ ಖಂಡಿಸುತ್ತದೆ” ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್ ಹೇಳಿದರು.
“ಅಕ್ರಮವಾಗಿ ಮಣ್ಣು ಅಗೆದು ಸಾಗಿಸುತ್ತಿರುವವರನ್ನು ತಾಲ್ಲೂಕು ಆಡಳಿತ ಪತ್ತೆಹಚ್ಚಿ, ಕಾನೂನುಬದ್ಧವಾಗಿ ಶಿಕ್ಷೆಗೆ ಗುರಿಪಡಿಸಬೇಕು. ಮಣ್ಣು ಸಾಗಾಟಕ್ಕೆ ಅನುಮತಿ ಇದೆಯೇ ಎಂಬುದನ್ನು ಪರಿಶೀಲಿಸಬೇಕು. ಕೃಷಿ ಭೂಮಿ ಹಾಗೂ ಸರ್ಕಾರಿ ಜಮೀನುಗಳನ್ನು ಹಾಳು ಮಾಡುವ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು” ಎಂದು ಅವರು ಆಗ್ರಹಿಸಿದರು.
ಹಿಂದೆಯೂ ದೂರು, ಕ್ರಮಕ್ಕೆ ಒತ್ತಾಯ
ತಾಲ್ಲೂಕಿನ ನಡಿಪಿನಾಯಕನಹಳ್ಳಿ, ಬಸವಾಪಟ್ಟಣ, ಕೊಲಿಮಿಹೊಸೂರು, ನಾರಾಯಣದಾಸರಹಳ್ಳಿ ಸೇರಿದಂತೆ ಹಲವು ಗ್ರಾಮಗಳ ವ್ಯಾಪ್ತಿಯಲ್ಲಿ ಅಕ್ರಮವಾಗಿ ಫಲವತ್ತಾದ ಮಣ್ಣು ತೆಗೆದು ಸಾಗಿಸಲಾಗುತ್ತಿದೆ ಎಂದು ರೈತರು ಈ ಹಿಂದೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು. ದೊಡ್ಡ ಟಿಪ್ಪರ್ ಗಳ ಸಂಚಾರದಿಂದ ಗ್ರಾಮೀಣ ರಸ್ತೆಗಳು ಹಾಳಾಗುತ್ತಿದ್ದು, ರಸ್ತೆ ಬದಿಯ ಬೆಳೆಗಳ ಮೇಲೆ ಧೂಳು ಆವರಿಸಿ ಹಾನಿಯಾಗುತ್ತಿದೆ ಎಂಬ ದೂರುಗಳೂ ಕೇಳಿಬಂದಿದ್ದವು.
ಈ ಹಿನ್ನೆಲೆಯಲ್ಲಿ ಹಿಂದಿನ ಪ್ರಕರಣಗಳನ್ನೂ ಗಮನದಲ್ಲಿಟ್ಟುಕೊಂಡು, ಈಗ ಮತ್ತೆ ಮಣ್ಣು ಅಗೆತದ ಆರೋಪ ಕೇಳಿಬಂದಿರುವ ಸ್ಥಳಗಳಲ್ಲಿ ಅಧಿಕಾರಿಗಳು ತಕ್ಷಣ ಪರಿಶೀಲನೆ ನಡೆಸಿ, ನಿಯಮ ಉಲ್ಲಂಘನೆಯಾಗಿದ್ದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ವ್ಯಕ್ತವಾಗಿದೆ.