Home News ಮಕ್ಕಳ ಬೆಳವಣಿಗೆಗೆ ಪೌಷ್ಟಿಕ ಆಹಾರ ಅತ್ಯಗತ್ಯ: ನ್ಯಾಯಾಧೀಶ ಮೊಹಮದ್ ರೋಷನ್ ಷಾ

ಮಕ್ಕಳ ಬೆಳವಣಿಗೆಗೆ ಪೌಷ್ಟಿಕ ಆಹಾರ ಅತ್ಯಗತ್ಯ: ನ್ಯಾಯಾಧೀಶ ಮೊಹಮದ್ ರೋಷನ್ ಷಾ

0
Sidlaghatta Poshan Maah and legal awareness programme inaugurated by Judge Mohammed Roshan Shah

Sidlaghatta : ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೌಷ್ಟಿಕ ಆಹಾರ ಅತ್ಯಗತ್ಯ. ಮಕ್ಕಳು ಹೊರಗಡೆ ದೊರೆಯುವ ಅನಾರೋಗ್ಯಕರ ತಿಂಡಿಗಳಿಂದ ದೂರವಿದ್ದು, ಮನೆಯಲ್ಲಿ ತಯಾರಿಸುವ ಶುದ್ಧ ಹಾಗೂ ಸಮತೋಲಿತ ಆಹಾರ ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಶಿಡ್ಲಘಟ್ಟ JMFC ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮದ್ ರೋಷನ್ ಷಾ ಹೇಳಿದರು. ನಗರದ ದಿ ನ್ಯೂ ಇಂಡಿಯನ್ ಪಬ್ಲಿಕ್ ಸ್ಕೂಲ್‌ನಲ್ಲಿ ಗುರುವಾರ ನಡೆದ ಪೋಷಣ್ ಮಾಸಾಚರಣೆ ಹಾಗೂ ಕಾನೂನು ಅರಿವು–ನೆರವು ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸಿದ ಅವರು, ಊಟ ಮಾಡುವಾಗ ಮೊಬೈಲ್, ಟಿವಿ ಸೇರಿದಂತೆ ಇತರ ಚಟುವಟಿಕೆಗಳಿಂದ ದೂರವಿದ್ದು, ಆಹಾರದ ಕಡೆ ಗಮನ ಹರಿಸುವಂತೆ ಸಲಹೆ ನೀಡಿದರು.

ಮಕ್ಕಳು ಯಾವ ಆಹಾರ ಸೇವಿಸಬೇಕು?

ತರಕಾರಿ, ಹಣ್ಣು, ಸೊಪ್ಪು, ಮೊಳಕೆಕಾಳು, ಮೊಟ್ಟೆ, ಮೀನು ಸೇರಿದಂತೆ ಪೌಷ್ಟಿಕ ಆಹಾರಗಳನ್ನು ನಿಯಮಿತವಾಗಿ ಸೇವಿಸಬೇಕು. ಚಿಪ್ಸ್, ಬೇಕರಿ ಉತ್ಪನ್ನಗಳು, ಪಾನಿಪುರಿ, ಗೋಬಿ ಮಂಚೂರಿಯಂತಹ ಹೆಚ್ಚು ಎಣ್ಣೆ, ಉಪ್ಪು ಹಾಗೂ ಕೃತಕ ಬಣ್ಣ ಹೊಂದಿರುವ ಆಹಾರಗಳ ಸೇವನೆಯನ್ನು ಕಡಿಮೆ ಮಾಡಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ವಿದ್ಯಾ ವಸ್ತ್ರದ್ ಮಾತನಾಡಿ, ಮಕ್ಕಳ ಲಂಚ್‌ ಬಾಕ್ಸ್‌ ನಲ್ಲಿ ಪ್ರತಿದಿನ ಒಂದೇ ರೀತಿಯ ಆಹಾರ ನೀಡದೆ, ವಿವಿಧ ಬಣ್ಣಗಳ ತರಕಾರಿ, ಹಣ್ಣು, ನಟ್ಸ್ ಹಾಗೂ ಇತರ ಪೌಷ್ಟಿಕ ಆಹಾರಗಳನ್ನು ಸೇರಿಸುವಂತೆ ಪೋಷಕರಿಗೆ ಸಲಹೆ ನೀಡಿದರು.

ಬಾಲ್ಯವಿವಾಹ, ಬಾಲಕಾರ್ಮಿಕ ಪ್ರಕರಣ ಕಂಡುಬಂದರೆ ಏನು ಮಾಡಬೇಕು?

ಕಾರ್ಯಕ್ರಮದಲ್ಲಿ ಮಕ್ಕಳ ಹಕ್ಕುಗಳು, ಮಕ್ಕಳ ಸುರಕ್ಷತೆ ಹಾಗೂ ಬಾಲ್ಯವಿವಾಹ ತಡೆ ಕುರಿತು ಅವರು ಜಾಗೃತಿ ಮೂಡಿಸಿದರು. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳಿಗೆ ಹಾಗೂ 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಗಂಡುಮಕ್ಕಳಿಗೆ ಮದುವೆ ಮಾಡುವುದು ಕಾನೂನುಬಾಹಿರ. ಇಂತಹ ಪ್ರಕರಣಗಳು ಕಂಡುಬಂದರೆ ಮಕ್ಕಳು ಮೌನವಾಗದೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದರು.

ಮಕ್ಕಳನ್ನು ಕೆಲಸಕ್ಕೆ ಕಳುಹಿಸುವುದು ತಪ್ಪು. ಮಕ್ಕಳ ಹಕ್ಕುಗಳ ಉಲ್ಲಂಘನೆ ಕಂಡುಬಂದಾಗ 112 ಅಥವಾ ಮಕ್ಕಳ ಸಹಾಯವಾಣಿ 1098ಕ್ಕೆ ಮಾಹಿತಿ ನೀಡಬಹುದು. ಮಾಹಿತಿ ನೀಡುವವರ ವಿವರಗಳನ್ನು ಗೌಪ್ಯವಾಗಿಡಲಾಗುವುದು ಎಂದರು.

ಶಾಲೆಯ LKG ಸೇರಿದಂತೆ ಎಲ್ಲ ತರಗತಿಗಳ ಮಕ್ಕಳಿಗೆ ಸುರಕ್ಷಿತ ಹಾಗೂ ಬಾಲಸ್ನೇಹಿ ವಾತಾವರಣ ಕಲ್ಪಿಸಬೇಕು. ಆಟದ ಮೈದಾನ ಹಾಗೂ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಲು ಮಕ್ಕಳಿಗೆ ಹೆಚ್ಚಿನ ಅವಕಾಶ ನೀಡಬೇಕು ಎಂದು ವಿದ್ಯಾ ವಸ್ತ್ರದ್ ಹೇಳಿದರು.

ಶೌಚಾಲಯದ ಅಶುಚಿತ್ವಕ್ಕೆ ನ್ಯಾಯಾಧೀಶರ ಅಸಮಾಧಾನ

ದಿ ನ್ಯೂ ಇಂಡಿಯನ್ ಪಬ್ಲಿಕ್ ಸ್ಕೂಲ್‌ ಗೆ ಭೇಟಿ ನೀಡಿದ್ದ ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮದ್ ರೋಷನ್ ಷಾ ಅವರು, ಶಾಲೆಯ ಶೌಚಾಲಯಗಳ ಅಶುಚಿತ್ವ ಕಂಡು ಅಸಮಾಧಾನ ವ್ಯಕ್ತಪಡಿಸಿದರು.

ಶೌಚಾಲಯಗಳ ಸ್ವಚ್ಛತೆ ಹಾಗೂ ನಿರ್ವಹಣೆ ಕುರಿತು ಪ್ರಾಂಶುಪಾಲರನ್ನು ಪ್ರಶ್ನಿಸಿದಾಗ, ಅವರು ಸಮರ್ಪಕವಾಗಿ ಸ್ಪಂದಿಸದಿರುವುದಕ್ಕೂ ನ್ಯಾಯಾಧೀಶರು ಬೇಸರ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ (DDPI) ದೂರು ದಾಖಲಿಸುವಂತೆ ತಮ್ಮ ಸಿಬ್ಬಂದಿಗೆ ಸೂಚಿಸಿದರು.

ಮಕ್ಕಳಿಗೆ ಸ್ವಚ್ಛ, ಸುರಕ್ಷಿತ ಹಾಗೂ ಬಾಲಸ್ನೇಹಿ ವಾತಾವರಣ ಕಲ್ಪಿಸುವುದು ಶಾಲೆಯ ಜವಾಬ್ದಾರಿಯಾಗಿದೆ. ಶಾಲೆಯಲ್ಲಿ ಅಗತ್ಯ ಮೂಲಸೌಕರ್ಯ ಹಾಗೂ ಸ್ವಚ್ಛತಾ ವ್ಯವಸ್ಥೆ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ವಿದ್ಯಾ ವಸ್ತ್ರದ್ ತಿಳಿಸಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಕಾರ್ಯದರ್ಶಿ ಸಿ.ಜಿ. ಭಾಸ್ಕರ್, ಸರ್ಕಾರಿ ಸಹಾಯಕ ಅಭಿಯೋಜಕ ಮೊಹಮದ್ ಖಾಜಾ , ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಪೋಷಣ್ ಮಾಸಾಚರಣೆ ಕುರಿತು ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ಪೌಷ್ಟಿಕ ಆಹಾರ, ಬಾಲ್ಯವಿವಾಹ ತಡೆ ಕುರಿತು ಬಾಲ್ಯವಿವಾಹ ನಿಷೇಧದ ಕುರಿತು ಬೃಹತ್ ಸಮುದಾಯ ಜಾಗೃತಿ ಜಾಥಾ ಹಾಗೂ ನ್ಯಾಯಾಲಯದ ಇತ್ತೀಚಿನ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ 301 ಪ್ರಕರಣ ಇತ್ಯರ್ಥ, ₹1.59 ಕೋಟಿ ಪಾವತಿ ವರದಿಗಳನ್ನೂ ಓದಿ.

In English: Nutritious food is essential for children’s physical and mental growth, and children should avoid unhealthy outside snacks and eat clean, balanced home-cooked food, said Mohammed Roshan Shah, Senior Civil Judge at the Sidlaghatta JMFC (Judicial Magistrate First Class) court, at a Poshan Maah (nutrition month) and legal awareness programme held at The New Indian Public School in the town on Thursday. He advised children to keep away from mobiles and TV while eating and to cut down on oily, salty and artificially coloured foods such as chips, bakery items, pani puri and gobi manchurian. Women and Child Welfare Department officer Vidya Vastrad advised parents to vary children’s lunch boxes, and spoke on child rights, child safety and child marriage, which is illegal for girls under 18 and boys under 21, urging that violations be reported on 112 or Childline 1098, with informants’ identities kept confidential. During the visit, the judge expressed displeasure over the unclean school toilets and the principal’s inadequate response, and directed his staff to file a complaint with the DDPI (Deputy Director of Public Instruction).

For Daily Updates WhatsApp ‘HI’ to 7406303366

error: Content is protected !!
Exit mobile version