
Sidlaghatta : ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (DCC ಬ್ಯಾಂಕ್) ಆರ್ಥಿಕವಾಗಿ ಸುಸ್ಥಿರವಾಗಿದ್ದು, ಗ್ರಾಹಕರು ಯಾವುದೇ ಅನುಮಾನವಿಲ್ಲದೆ ಬ್ಯಾಂಕ್ ನಲ್ಲಿ ಠೇವಣಿ ಇಟ್ಟು ವ್ಯವಹರಿಸಬಹುದು ಎಂದು ಬ್ಯಾಂಕ್ ನಿರ್ದೇಶಕ ಡಾಲ್ಫಿನ್ ಸ್ಕೂಲ್ ನಾಗರಾಜ್ ಹೇಳಿದರು. ಶಿಡ್ಲಘಟ್ಟ ನಗರದ ಶ್ರೀ ಬಸವೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಗುರುವಾರ ನಡೆದ ಶಿಡ್ಲಘಟ್ಟ ಟೌನ್ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ 2025–26ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
“ತಾಂತ್ರಿಕ ಕಾರಣಗಳಿಂದಾಗಿ ಈ ಹಿಂದೆ DCC ಬ್ಯಾಂಕ್ ಗೆ ಆಡಳಿತ ಮಂಡಳಿ ಇರಲಿಲ್ಲ. ಇದೀಗ ಎಲ್ಲ ಸಮಸ್ಯೆಗಳು ಬಗೆಹರಿದಿದ್ದು, ಆಡಳಿತ ಮಂಡಳಿ ರಚನೆಯಾಗಿದೆ. ಗುರುವಾರ ಮೊದಲ ಸಭೆ ನಡೆದಿದ್ದು, ರೈತರು ಮತ್ತು ಸ್ತ್ರೀಶಕ್ತಿ ಸಂಘಗಳ ಪರವಾಗಿ ಹಲವು ತೀರ್ಮಾನಗಳನ್ನು ಕೈಗೊಳ್ಳಲಾಗುವುದು” ಎಂದರು.
DCC ಬ್ಯಾಂಕ್ ಆರ್ಥಿಕ ಸಂಕಷ್ಟಕ್ಕೆ ಕಾರಣವೇನು?
“ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ DCC ಬ್ಯಾಂಕ್ ನಿಂದ ಸ್ತ್ರೀಶಕ್ತಿ ಸಂಘಗಳು ಪಡೆದಿರುವ ಸಾಲ ಹಾಗೂ ಬಡ್ಡಿ ಮನ್ನಾ ಮಾಡಲಾಗುತ್ತದೆ ಎಂಬ ವದಂತಿ ಹರಡಿತ್ತು. ಇದರಿಂದ ಕೆಲವು ಸಂಘಗಳ ಸದಸ್ಯರು ಸಾಲ ಮತ್ತು ಬಡ್ಡಿ ಪಾವತಿಸಿರಲಿಲ್ಲ. ಪರಿಣಾಮ ಬ್ಯಾಂಕ್ ಆರ್ಥಿಕ ಸಂಕಷ್ಟ ಎದುರಿಸಿದ್ದು ನಿಜ. ಆದರೆ ಅದನ್ನು ಮೆಟ್ಟಿ ನಿಂತು ಇದೀಗ ಬ್ಯಾಂಕ್ ಸದೃಢವಾಗಿದೆ” ಎಂದು ತಿಳಿಸಿದರು.
ಮಾಜಿ ಶಾಸಕ ಎಂ.ರಾಜಣ್ಣ ಮಾತನಾಡಿ, ರಾಜ್ಯ ಸರ್ಕಾರದ ಆದೇಶದಂತೆ ಸೆಪ್ಟೆಂಬರ್ 24ರೊಳಗೆ ಎಲ್ಲ ಸಹಕಾರ ಸಂಘಗಳು ವಾರ್ಷಿಕ ಸರ್ವ ಸದಸ್ಯರ ಸಭೆ ನಡೆಸುತ್ತಿವೆ. ಸಭೆಯಲ್ಲಿ ಸಂಘದ ಆಡಳಿತ ಸ್ಥಿತಿ, ಹಣಕಾಸು ವ್ಯವಹಾರ, ಲಾಭ–ನಷ್ಟ ಹಾಗೂ ವಿವಿಧ ಯೋಜನೆಗಳ ಕುರಿತು ಸದಸ್ಯರಿಗೆ ಮಾಹಿತಿ ನೀಡಲಾಗುತ್ತಿದೆ ಎಂದರು.
ರೈತರಿಗೆ ಎಷ್ಟು ಸಾಲ ನೀಡಲಾಗಿದೆ?
ಹಸಿರು ಸೇನೆ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ಬರಗಾಲದಿಂದ ರೈತರು ಹಾಗೂ ಮಹಿಳೆಯರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ DCC ಬ್ಯಾಂಕ್ ಸೇರಿದಂತೆ ಸಹಕಾರ ಬ್ಯಾಂಕ್ ಗಳು ರೈತರು ಮತ್ತು ಸ್ತ್ರೀಶಕ್ತಿ ಸಂಘಗಳ ಸದಸ್ಯರಿಗೆ ಹೆಚ್ಚಿನ ಸಾಲ ಸೌಲಭ್ಯ ಕಲ್ಪಿಸಿ, ಅವರ ನೆರವಿಗೆ ನಿಲ್ಲಬೇಕು ಎಂದು ಆಗ್ರಹಿಸಿದರು.
ಬ್ಯಾಂಕ್ ಅಧ್ಯಕ್ಷ ಶೆಟ್ಟಹಳ್ಳಿ ರಾಮಚಂದ್ರಪ್ಪ ಮಾತನಾಡಿ, ಬ್ಯಾಂಕ್‌ನಿಂದ ರೈತರಿಗೆ ₹9.50 ಕೋಟಿ ಸಾಲ ನೀಡಲಾಗಿದೆ. ಸಾಲ ಪಡೆದವರು ಸಕಾಲದಲ್ಲಿ ಮರುಪಾವತಿ ಮಾಡುವ ಮೂಲಕ ಬ್ಯಾಂಕ್ ಆರ್ಥಿಕವಾಗಿ ಮತ್ತಷ್ಟು ಸದೃಢವಾಗಲು ಸಹಕರಿಸಬೇಕು. ಇದರಿಂದ ಇನ್ನಷ್ಟು ರೈತರಿಗೆ ಸಾಲ ನೀಡಲು ಸಾಧ್ಯವಾಗಲಿದೆ ಎಂದು ಹೇಳಿದರು.
ಸಭೆಯಲ್ಲಿ 2025–26ನೇ ಸಾಲಿನ ವಾರ್ಷಿಕ ಬಜೆಟ್ ಮಂಡಿಸಿ ಅನುಮೋದನೆ ಪಡೆಯಲಾಯಿತು. ಲಾಭ–ನಷ್ಟದ ವರದಿಯನ್ನೂ ಮಂಡಿಸಲಾಯಿತು.
DCC ಬ್ಯಾಂಕ್ ವ್ಯವಸ್ಥಾಪಕ ಆನಂದ್, ಉಪಾಧ್ಯಕ್ಷೆ ಎಂ.ಶೋಭಾರಾಣಿ, ಬಿ.ನಾರಾಯಣಸ್ವಾಮಿ, ನರಸಿಂಹಮೂರ್ತಿ, ಕೆ.ವೆಂಕಟೇಶಪ್ಪ, ಪಿ.ಎನ್.ಪ್ರಶಾಂತ್, ಎನ್.ನರಸಿಂಹಯ್ಯ, ಪ್ರಭಾವತಿ, ನಳಿನ ಶಶಿಧರ್, ನಾರಾಯಣಪ್ಪ, ಕಾರ್ಯನಿರ್ವಾಹಕ ಅಧಿಕಾರಿ ಕೆ.ದೇವಿಕ ಉಪಸ್ಥಿತರಿದ್ದರು.
ಇದೇ ಸಂಘದ ಹಿಂದಿನ ವರ್ಷದ ಸಭೆ ಕುರಿತು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ ವರದಿಯನ್ನು, ತಾಲ್ಲೂಕಿನ ಇತರ ಸಹಕಾರ ಸಂಘಗಳ ಮಹಾಸಭೆಗಳ ಕುರಿತು ಮಳ್ಳೂರು ರೇಷ್ಮೆ ಬೆಳೆಗಾರರ ಸಂಘಕ್ಕೆ ₹10.07 ಲಕ್ಷ ನಿವ್ವಳ ಲಾಭ ಹಾಗೂ ಸಾಲ ಸಕಾಲ ಮರುಪಾವತಿಸಿ ಸಹಕಾರಿ ಕ್ಷೇತ್ರ ಬಲಪಡಿಸಿ: ಆನೆಮಡಗು ಸಂಘ ಅಧ್ಯಕ್ಷ ಸಲಹೆ ವರದಿಗಳನ್ನೂ ಓದಿ.
In English: The Kolar–Chikkaballapur District Central Cooperative Bank (DCC Bank) is financially stable and customers can deposit and transact without any doubt, bank director Dolphin School Nagaraj said at the 2025–26 annual general meeting of the Sidlaghatta Town Silk Growers’ and Farmers’ Service Cooperative Society, held at the Sri Basaveshwaraswamy temple premises in the town on Thursday. He said the bank earlier had no board of management for technical reasons; a board has now been formed and held its first meeting on Thursday. He said the bank did face financial difficulty after some Stree Shakti groups stopped repaying loans and interest following a rumour during the election that a Congress government would waive them, but that it has since recovered. Former MLA M. Rajanna said all cooperative societies are holding annual general meetings by September 24 as per a state government order. Hasiru Sene Raitha Sangha state working president Bhaktarahalli Byregowda urged cooperative banks to extend more credit to drought-hit farmers and Stree Shakti members. Bank president Shettahalli Ramachandrappa said ₹9.50 crore in loans had been given to farmers and urged timely repayment. The society’s 2025–26 budget was presented and approved.