
Sidlaghatta : “ದೇಶದ ಶೇ 50ಕ್ಕೂ ಹೆಚ್ಚು ಮಂದಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರೂ, ಜಿಡಿಪಿಗೆ ಕೃಷಿ ಕ್ಷೇತ್ರದ ಕೊಡುಗೆ ಕೇವಲ ಶೇ 16 ಮಾತ್ರ ಇದೆ. ಈ ದರ ಕನಿಷ್ಠ ಶೇ 30 ರಿಂದ 40ಕ್ಕೆ ಏರಿಕೆಯಾದಲ್ಲಿ ನಮ್ಮ ರೈತರು ವೈದ್ಯರು ಅಥವಾ ಸಾಫ್ಟ್‌ವೇರ್ ಇಂಜಿನಿಯರ್‌ಗಳಿಗಿಂತಲೂ ಉತ್ತಮ ಜೀವನ ನಡೆಸಲು ಸಾಧ್ಯ,” ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ತಿಳಿಸಿದರು.
ನಗರದ ಕೋಟೆ ವೃತ್ತದಲ್ಲಿ ನೂತನವಾಗಿ ಜೀರ್ಣೋದ್ಧಾರಗೊಂಡ ಶ್ರೀ ಕೋಟೆ ಸೋಮೇಶ್ವರಸ್ವಾಮಿ ದೇವಾಲಯಕ್ಕೆ ಭಾನುವಾರ ಭೇಟಿ ನೀಡಿ, ದೇವರ ದರ್ಶನ ಪಡೆದ ಬಳಿಕ ಅವರು ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದರು. ಜಂಗಮಕೋಟೆ ಭಾಗದಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಪ್ರಸ್ತಾಪಿಸಿದ ಶ್ರೀಗಳು, “ಮಠವು ರೈತರ ಹಿತಾಸಕ್ತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಯಾವಾಗಲೂ ರೈತರ ಪರವಾಗಿಯೇ ಇರುತ್ತದೆ,” ಎಂದು ಭರವಸೆ ನೀಡಿದರು.
ರೈತರು ತಮ್ಮ ಜೀವನದಲ್ಲಿ ಶಿಸ್ತು ಮತ್ತು ಉಳಿತಾಯವನ್ನು ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದ ಸ್ವಾಮೀಜಿ, “ಆಡಂಬರದ ಮದುವೆ ಮತ್ತು ಸಮಾರಂಭಗಳಿಗೆ ವ್ಯರ್ಥವಾಗಿ ಹಣ ಖರ್ಚು ಮಾಡಬೇಡಿ. ಆ ಹಣವನ್ನು ಉಳಿತಾಯ ಮಾಡಿ ನಿಮ್ಮ ಮಕ್ಕಳ ಭವಿಷ್ಯಕ್ಕೆ ಬಳಸಿ. ಮಕ್ಕಳಿಗೆ ಕೇವಲ ಶಿಕ್ಷಣ ನೀಡಿದರೆ ಸಾಲದು, ಉತ್ತಮ ಸಂಸ್ಕಾರವನ್ನೂ ಕಲಿಸಿ. ಸುಸಂಸ್ಕೃತ ಮಕ್ಕಳೇ ಸಮಾಜದ ನಿಜವಾದ ಆಸ್ತಿ,” ಎಂದು ಅಭಿಪ್ರಾಯಪಟ್ಟರು.
ದೇವಾಲಯದ ಜೀರ್ಣೋದ್ಧಾರದ 48ನೇ ದಿನದ ಮಂಡಲ ಪೂಜೆಯ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಶ್ರೀಗಳು ದೇವಾಲಯದ ಕಳಶಕ್ಕೆ ಪೂಜೆ ಸಲ್ಲಿಸಿ, ಗರ್ಭಗುಡಿಯಲ್ಲಿ ಮಹಾಮಂಗಳಾರತಿ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಆದಿಚುಂಚನಗಿರಿಯ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳಾನಂದ ಸ್ವಾಮಿ, ಮಾಜಿ ಶಾಸಕ ಎಂ.ರಾಜಣ್ಣ, ತಹಶೀಲ್ದಾರ್ ಎನ್.ಗಗನ ಸಿಂಧು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.