
Sadali, Sidlaghatta, Chikkaballapur : ಕಳೆದ ಕೆಲವು ದಿನಗಳಿಂದ ತಾಲ್ಲೂಕಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸಾದಲಿ ಹೊಸಕೆರೆ ತುಂಬಿ ಹರಿಯುತ್ತಿದೆ. ಉತ್ತರ ಪೆನ್ನಾರ್ ನದಿ ಕಣಿವೆಯ ಭಾಗದಲ್ಲಿರುವ ಈ ಕೆರೆಯು ಈಗ ನೀರಿನಿಂದ ಉಕ್ಕಿ ಹರಿದು ಸ್ಥಳೀಯರಲ್ಲಿ ಹರ್ಷದ ಅಲೆ ಎಬ್ಬಿಸಿದೆ.
ಸಾದಲಿ ಹೊಸಕೆರೆ ಸುಮಾರು 45 ಹೆಕ್ಟೇರ್ ಅಚ್ಚುಕಟ್ಟಿನ ಪ್ರದೇಶವನ್ನೂ ಹೊಂದಿದ್ದು, ನೀರಿನ ಶೇಖರಣಾ ವ್ಯಾಪ್ತಿ 4.21 ಹೆಕ್ಟೇರ್. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯು ಈ ಕೆರೆಯನ್ನಷ್ಟೇ ಅಲ್ಲದೆ, ಎಸ್.ದೇವಗಾನಹಳ್ಳಿ, ಸಾದಲಿ, ಇರಗಪ್ಪನಹಳ್ಳಿ, ಅಕ್ಕಯ್ಯಗಾರು ಹಾಗೂ ಎಸ್.ಗೊಲ್ಲಹಳ್ಳಿ ಪ್ರದೇಶಗಳಲ್ಲಿರುವ ಅನೇಕ ಕೆರೆಗಳನ್ನೂ ಉಕ್ಕಿ ಹರಿಯುವಂತೆ ಮಾಡಿದೆ.
ಪ್ರಕೃತಿಯ ಈ ಮನಮೋಹಕ ದೃಶ್ಯವನ್ನು ಸ್ಥಳೀಯರು ಆನಂದದಿಂದ ಕಂಡು ಹರಿಯುವ ನೀರಿನಲ್ಲಿ ಕೊಡಮೆ ಹಾಕಿ ಮೀನು ಹಿಡಿಯುತ್ತಿದ್ದ ಯುವಕರು, ಹಾಗೂ ರಸ್ತೆ ಮೇಲಿನ ನೀರಿನಲ್ಲಿ ಆಟವಾಡುತ್ತಿದ್ದ ಮಕ್ಕಳು ಸಂಭ್ರಮದ ನೋಟ ಸೃಷ್ಟಿಸಿದರು.
ಸಾದಲಿ ಹೊಸಕೆರೆ ತುಂಬಿದ ನೀರು ಸಾದಲಮ್ಮನ ಕೆರೆಗೆ ಹರಿಯುತ್ತದೆ. ಅಲ್ಲಿಂದ ಮುಂದೆ ರಾಮಸಮುದ್ರ ಕೆರೆಯ ಕಡೆಗೆ ಹರಿಯುತ್ತಿದ್ದು, ಈ ಕೆರೆಯೂ ಈಗ ಸಂಪೂರ್ಣವಾಗಿ ತುಂಬಿ ಹರಿಯುತ್ತಿದೆ.