
Sadali, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಗ್ರಾಮದ ಹೊರವಲಯದಲ್ಲಿ “ಗುಡಿಬಂಡೆ” ಹೆಸರಿನ ಪ್ರಸ್ತಾಪವಿರುವ ಮೊಟ್ಟ ಮೊದಲ ಶಾಸನ ಪತ್ತೆಯಾಗಿದೆ.
“ವಿಜಯನಗರ ಅರಸರ ಕಾಲಕ್ಕೆ ಅಂದರೆ ಕ್ರಿ.ಶ. 1346 ಗೆ ಸೇರಿದ ಈ ವೀರಗಲ್ಲು ಮತ್ತು ಕನ್ನಡ ಲಿಪಿಯ ಶಾಸನ ವಿಶಿಷ್ಟವಾದುದಾಗಿದೆ. ಪೆನುಗೊಂಡೆಯ ಕಾಮಯನಾಯಕನ ಪ್ರಸ್ತಾಪ ಮತ್ತು ಗುಡಿಬಂಡೆಯ ದುರ್ಗದ ಕೊಂಡಯದೇವನ ಆಳ್ವಿಕೆಯಲ್ಲಿ ಮರಗಯ್ಯನ ಮಗ ಕಾಟೆಯನೆಂಬ ವೀರನು ಇಬ್ಬರು ಕುದುರೆ ವೀರರೊಂದಿಗೆ ನಡೆದ ಹುಯ್ಯಲಿನಲ್ಲಿ(ಹೋರಾಟದಲ್ಲಿ) ಕುದುರೆಗಳನ್ನೂ ಕೊಂದು ಮರಣಿಸಿದಂತೆ ತೋರುತ್ತಿದೆ” ಎಂದು ಶಾಸನವನ್ನು ಅಧ್ಯಯನ ಮಾಡಿದ ಲಿಪಿತಜ್ಞ ಹಾಗೂ ಶಾಸನತಜ್ಞ ಪಿ.ವಿ.ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
“ಮೂರು ಹಂತಗಳಲ್ಲಿರುವ ಈ ವೀರಗಲ್ಲಿನ ಚಿತ್ರಣದಲ್ಲಿ ಕೆಳಗಿನ ಹಂತದಲ್ಲಿ ಇಬ್ಬರು ಕುದುರೆ ಮೇಲೆ ಕುಳಿತ ವೀರರ ನಡುವೆ ಒಬ್ಬ ವೀರ ಹೋರಾಡುತ್ತಿದ್ದಾನೆ. ಮಧ್ಯದ ಹಂತದಲ್ಲಿ ಕೈಲಾಸಕ್ಕೆ ಅಪ್ಸರೆಯರು ಹೋರಾಡಿ ಮಡಿದ ವೀರನನ್ನು ಕರೆದೊಯ್ಯುತ್ತಿದ್ದಾರೆ. ಮೇಲಿನ ಹಂತದಲ್ಲಿ ಲಿಂಗ, ನಂದಿ ಮತ್ತು ಪೂಜೆಯಲ್ಲಿ ನಿರತನಾದ ಕಾಳಾಮುಖ ಯತಿ ಮತ್ತು ವೀರನನ್ನು ನಾವು ಕಾಣಬಹುದಾಗಿದೆ” ಎಂದು ಅವರು ವಿವರಿಸಿದರು.
ಶಾಸನದ ಅಧ್ಯಯನಕ್ಕೆ ಆಗಮಿಸಿದ್ದ ಶಾಸನತಜ್ಞ ಕೆ.ಆರ್.ನರಸಿಂಹನ್ ಅವರು ಮಾತನಾಡಿ, “ನೊಳಂಬವಾಡಿಯ ಒಂದು ಪ್ರಮುಖ ವಿಭಾಗವಾಗಿದ್ದ ಸಾದಲಿನಾಡು, ಚೋಳರ ಕಾಲಕ್ಕೆ ಮಾರಾಯಪಾಡಿಯ ಒಂದು ವಿಭಾಗವಾಗಿತ್ತು. ಆದರೆ ಈಗ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸಾದಲಿ ಹೋಬಳಿ ಕೇಂದ್ರವಾಗಿದೆ.
ನೊಳಂಬರು ಚೋಳರ ಸಾಮಂತರಾಗಿದ್ದ ಕಾಲದಲ್ಲಿ, ಅಂದರೆ ಹತ್ತನೆಯ ಶತಮಾನದ ಅಂತಿಮಭಾಗದಲ್ಲಿ ಇಲ್ಲಿ ನಿರ್ಮಾಣವಾದ ಶಿವಾಲಯವೊಂದರ ದೇವಕೋಷ್ಟಗಳು, ಮತ್ತು ಸಪ್ತಮಾತೃಕೆಯರ ವಿಗ್ರಹಗಳು ಹೊಲವೊಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಹೊಯ್ಸಳರ ವಿಷ್ಣುವರ್ಧನನು ಹನ್ನೊಂದನೆಯ ಶತಮಾನದಲ್ಲಿ ಚೋಳರನ್ನು ಕಂಚಿಯವರೆಗೂ ಓಡಿಸಿ ವಾಪಾಸು ರಾಜಧಾನಿಗೆ ಬರುವಾಗ ಸಾದಲಿಯಲ್ಲಿದ್ದ ಇರುಂಗೋಳಚೋಳನ ಉತ್ತರಾಧಿಕಾರಿಗಳನ್ನು ಹಿಮ್ಮೆಟ್ಟಿಸಿದ ಸಮಾಚಾರವೂ ಚರಿತ್ರೆಯಲ್ಲಿ ಇದೆ.
ಆನಂತರ ಈ ಪ್ರಾಂತಕ್ಕೆ ವಿಜಯನಗರದ ಸೇನಾಪತಿ ಕಂಟಿಕಾರರಾಯರಗಂಡ ತೆಪ್ಪದ ನಾಗಣ್ಣ ಒಡೆಯರ್ ಅಧಿಕಾರಿಯಾಗುತ್ತಾನೆ. ಆತ ಮತ್ತು ಆತನ ಮಗನಾದ ದೇವಣ್ಣ ಒಡೆಯರುಗಳಿಂದಲೇ ಈ ಗ್ರಾಮದ ಪೆದ್ದಗುಡಿ ಎವಿಸಿಕೊಂಡ ಚನ್ನಕೇಶವನ ಆಲಯ ನಿರ್ಮಾಣ ಆಗಿರುವುದು.
ಇವುಗಳ ಜೊತೆ ಈ ಪರಿಸರದಲ್ಲಿ ಕಾಳಿ, ಭೈರವ, ಭೈರವ ಪಾದಗಳು, ಅಪ್ರಕಟಿತ ವೀರಗಲ್ಲು ಶಾಸನ ಇರುವ ಪುರಾತನ ನಿರ್ಜನವಸತಿ ಕಾಣಸಿಗುತ್ತದೆ.
ಈಗ ಸಿಕ್ಕಿರುವ ವೀರಗಲ್ಲು ಶಾಸನದಲ್ಲಿ ಗುಡಿಬಂಡೆಯ ಹೆಸರಿರುವ ಮೊದಲ ಶಾಸನವಿದು ಎಂಬುದು ವಿಶೇಷವಾಗಿದೆ” ಎಂದು ಹೇಳಿದರು.
ಶಾಸನತಜ್ಞ ಕೆ.ಧನಪಾಲ್ ಮತ್ತು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಎ.ಎಂ.ತ್ಯಾಗರಾಜ್, ಸಾದಲಿ ನಾಗೇಶ್, ನಾಗರಾಜ್, ವಿಜಯಶಂಕರ್, ಡಿ.ಎನ್.ಸುದರ್ಶನರೆಡ್ಡಿ ಹಾಜರಿದ್ದರು.