
Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿಯಲ್ಲಿ ಕೈಗಾರಿಕೆ ಸ್ಥಾಪನೆಗಾಗಿ ಭೂಸ್ವಾಧೀನಗೊಂಡ ರೈತರಿಗೆ ಸೂಕ್ತ ಭೂಪರಿಹಾರ, ಶಾಶ್ವತ ಉದ್ಯೋಗ ಹಾಗೂ ಕೈಗಾರಿಕಾ ಅಭಿವೃದ್ಧಿಗೆ ತ್ವರಿತ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯದೊಂದಿಗೆ KIADB ರೈತ ಪರ ಹೋರಾಟ ಸಮಿತಿ ಸದಸ್ಯರು ಕರ್ನಾಟಕದ ಬೃಹತ್ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಎಂ.ಬಿ. ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು.
ಬೆಂಗಳೂರು ನಗರದ ಗೃಹ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಮಿತಿಯ ಪದಾಧಿಕಾರಿಗಳು ಸಚಿವರನ್ನು ಭೇಟಿಯಾಗಿ, 13 ಹಳ್ಳಿಗಳ 2823 ಎಕರೆ ಭೂಮಿಯನ್ನು ಕೆಐಎಡಿಬಿ ಮೂಲಕ ಸ್ವಾಧೀನ ಮಾಡಲಾಗಿದ್ದು, 13 ತಿಂಗಳು ಕಳೆದರೂ ಯಾವುದೇ ಕೈಗಾರಿಕಾ ಅಭಿವೃದ್ಧಿ ಪ್ರಕ್ರಿಯೆ ಆರಂಭವಾಗಿಲ್ಲವೆಂದು ತಿಳಿಸಿದರು.
ಅವರು ಮನವಿಯಲ್ಲಿ ಸರಕಾರ ಈ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪನೆಗೆ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಬೇಕು, ನೀರಾವರಿ ಪ್ರದೇಶಗಳನ್ನು ಹೊರತುಪಡಿಸಬೇಕು, ಹಾಗೂ ಭೂಮಿ ನೀಡಿದ ರೈತರಿಗೆ ಎಕರೆಗೊಂದು ₹3 ಕೋಟಿ ಪರಿಹಾರ ಹಾಗೂ ಶಾಶ್ವತ ಉದ್ಯೋಗ ನೀಡಬೇಕು ಎಂಬುದಾಗಿ ಒತ್ತಾಯಿಸಿದರು.
ಪಿಎಸ್‌ಎಲ್ ಕಂಪನಿಗೆ ಸಂಬಂಧಿಸಿದ ಭೂಮಿ ಕುರಿತು, ಕಂಪನಿಯಿಂದ ರೈತರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ, ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಯಿತು.
ಮನವಿಗೆ ಪ್ರತಿಕ್ರಿಯಿಸಿದ ಸಚಿವ ಎಂ.ಬಿ. ಪಾಟೀಲ್, “ನಾನು ಸ್ವತಃ ರೈತ ಕುಟುಂಬದಿಂದ ಬಂದವನಾಗಿದ್ದು, ರೈತರಿಗೆ ಅನ್ಯಾಯ ಆಗದಂತೆ ಎಲ್ಲ ರೀತಿಯ ಕ್ರಮ ವಹಿಸಲಾಗುವುದು. ಶೀಘ್ರದಲ್ಲೇ ಮೂರನೇ ಅಧಿಸೂಚನೆ ಹೊರಡಿಸಿ, ಜಿಲ್ಲಾಧಿಕಾರಿಗಳ ಸಭೆ ನಡೆಸಲಾಗುವುದು” ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ತಾಲ್ಲೂಕು ಅಧ್ಯಕ್ಷ ಮುನೇಗೌಡ, ಯುವ ಘಟಕದ ಸುಬ್ರಮಣಿ, ಮತ್ತು ಪದಾಧಿಕಾರಿಗಳಾದ ಪ್ರಭುಗೌಡ, ನಾಗರಾಜ್, ವೆಂಕಟೇಶ್, ಪ್ರಮೋದ್‌ಗೌಡ, ಹರೀಶ್, ಈರಪ್ಪ, ಪ್ರದೀಪ್‌ಗೌಡ, ಚಿನ್ನಪ್ಪ, ಜೆ.ಸಿ. ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.