
Y Hunasenahalli, Sidlaghatta, Chikkaballapur : ಶಿಡ್ಲಘಟ್ಟ ತಾಲ್ಲೂಕಿನ Y ಹುಣಸೇನಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದೇಹಿ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಿತು.
ಈ ಶಿಬಿರದಲ್ಲಿ ಹೃದಯ, ನರ, ಕಿಡ್ನಿ, ಮೂತ್ರಕೋಶ, ಮೂತ್ರಪಿಂಡ, ಕ್ಯಾನ್ಸರ್, ಮೂಳೆ ನೋವು, ಸ್ತ್ರೀಯರ ಆರೋಗ್ಯ ಸಮಸ್ಯೆಗಳು, ಕಿವಿ, ಮೂಗು, ಗಂಟಲು ಸೇರಿದಂತೆ ವಿವಿಧ ಕಾಯಿಲೆಗಳ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಯಿತು. ಜೊತೆಗೆ ಉಚಿತ ಎಕೊ ಹಾಗೂ ಇಸಿಜಿ ಪರೀಕ್ಷೆಗಳು ಸಹ ನೆರವೇರಿಸಲಾಯಿತು.
ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಆರೋಗ್ಯ ಸೌಲಭ್ಯಗಳ ಅಗತ್ಯ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಈ ರೀತಿಯ ಶಿಬಿರಗಳು ಗ್ರಾಮಸ್ಥರಿಗೆ ಅತ್ಯಂತ ಉಪಯುಕ್ತವಾಗುತ್ತಿವೆ ಎಂದು ಸ್ಥಳೀಯರು ಪ್ರಶಂಸಿಸಿದರು.
ಡಾ. ತೇಜಶ್ರೀ ಅವರು ಮಾತನಾಡಿ, “ಈ ಶಿಬಿರಗಳು ಗ್ರಾಮೀಣ ಜನತೆಗೆ ತಜ್ಞ ವೈದ್ಯರ ನೇರ ಸಲಹೆ ಮತ್ತು ಚಿಕಿತ್ಸೆ ಪಡೆಯಲು ಅವಕಾಶ ನೀಡುತ್ತಿವೆ. ಈಗಾಗಲೇ ಇರಗಂಪಳ್ಳಿ, ಚೇಳೂರು, ಅಕ್ಕಿಮಂಗಳ, ಕುರುಬೂರು ಕೆಂಚಾರ್ಲಹಳ್ಳಿ, ಕುಂದಲಗುರ್ಕಿ ಸೇರಿದಂತೆ ಹಲವು ಪಿಎಚ್ಸಿಗಳಲ್ಲಿ ಶಿಬಿರಗಳು ನಡೆದಿವೆ. ಅಕ್ಟೋಬರ್ 30ರಂದು ಮೇಲೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೂ ಶಿಬಿರ ನಡೆಯಲಿದೆ. ಗ್ರಾಮಸ್ಥರು ಈ ಅವಕಾಶವನ್ನು ತಪ್ಪದೇ ಬಳಸಿಕೊಳ್ಳಬೇಕು,” ಎಂದರು.
ಈ ಸಂದರ್ಭದಲ್ಲಿ ತಜ್ಞ ವೈದ್ಯರಾದ ಡಾ. ಗೋವಿಂದ್, ಡಾ. ಸುಷ್ಮಾ, ಡಾ. ಪೃಥ್ವಿ, ಡಾ. ನಮ್ರತಾ, ಡಾ. ಸಂಜನಾ ಉಪಸ್ಥಿತರಿದ್ದರು.