
Sidlaghatta : ಶಿಡ್ಲಘಟ್ಟ-ದಿಬ್ಬೂರಹಳ್ಳಿ ರಸ್ತೆಯ ಅಬ್ಲೂಡು ವೃತ್ತದಲ್ಲಿದ್ದ ನೂರಾರು ವರ್ಷಗಳ ಹಳೆಯ ಆಲದ ಮರ ಭಾರೀ ಮಳೆಗೆ ನೆಲಕ್ಕುರುಳಿದೆ. ಮುಂಜಾನೆ ಸಮಯದಲ್ಲಿ ಮರ ಬಿದ್ದುದರಿಂದ ಸಂಭವಿಸಬಹುದಾದ ದೊಡ್ಡ ದುರಂತ ತಪ್ಪಿತು.
ಬುಧವಾರ ಹಾಗೂ ಗುರುವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಗ್ರಾಮ ಕೇಂದ್ರದಲ್ಲಿದ್ದ ಬೃಹತ್ ಆಲದ ಮರ ಉರುಳಿ ಬಿದ್ದಿದ್ದು, ಮರ ಬಿದ್ದಾಗ ಭಾರಿ ಸದ್ದು ಕೇಳಿ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದರು. ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ಬೆಳಗ್ಗೆ ಸ್ಥಳೀಯರು ಹಾಗೂ ಸಿಬ್ಬಂದಿ ಮರ ತೆರವು ಕಾರ್ಯಕ್ಕೆ ಮುಂದಾಗಿದ್ದು, ಮಧ್ಯಾಹ್ನದವರೆಗೂ ಕಾರ್ಯ ಮುಂದುವರಿಯಿತು. ಸಂಜೆ ವೇಳೆಗೆ ಸಂಚಾರಕ್ಕೆ ಅನುಕೂಲವಾಗುವಂತೆ ಮಾರ್ಗ ಮುಕ್ತಗೊಳಿಸಲಾಯಿತು.
ಅಬ್ಲೂಡು ವೃತ್ತವು ಸುತ್ತಮುತ್ತಲಿನ ಅನೇಕ ಗ್ರಾಮಗಳ ವ್ಯಾಪಾರ ಕೇಂದ್ರವಾಗಿದ್ದು, ಇಲ್ಲಿ ತಳ್ಳುಗಾಡಿ ವ್ಯಾಪಾರಿಗಳು ಹಣ್ಣು-ತರಕಾರಿ ಮಾರಾಟ ಮಾಡುತ್ತಿದ್ದರು. ಬಸ್‌ಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳು, ವಯೋವೃದ್ಧರು, ಭಕ್ತರು ಹಾಗೂ ವ್ಯಾಪಾರಿಗಳು ಈ ಮರದ ನೆರಳಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.