
Sidlaghatta : ಶಿಡ್ಲಘಟ್ಟ ನಗರದ ಅಂಚಿನಲ್ಲಿರುವ ಗೌಡನಕೆರೆಗೆ ಮಣ್ಣು, ಕಸ, ಕಟ್ಟಡ ತ್ಯಾಜ್ಯ ಸುರಿದು ಕೆರೆ ಮುಚ್ಚಲಾಗುತ್ತಿದೆ ಮತ್ತು ಮಾಲಿನ್ಯಗೊಳಿಸಲಾಗುತ್ತಿದೆ ಎಂಬ ದೂರುಗಳ ಹಿನ್ನಲೆಯಲ್ಲಿ ತಹಶೀಲ್ದಾರ್ ಗಗನ ಸಿಂಧು ಹಾಗೂ ನಗರಸಭೆ ಪೌರಾಯುಕ್ತೆ ಜಿ.ಅಮೃತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರೋತ್ಥಾನ ಹಂತ–4ರಲ್ಲಿ ರಾಜಕಾಲುವೆ ಸ್ವಚ್ಛತಾ ಕಾರ್ಯದಲ್ಲಿ ತೆಗೆದ ಹೂಳು-ಮಣ್ಣನ್ನು ಕೆರೆಯ ಅಂಚಿನಲ್ಲಿ ಸುರಿಯುತ್ತಿರುವ ಕುರಿತು ವರದಿಯಾಗಿತ್ತು. ಜೊತೆಗೆ ರೈತ ಸಂಘದ ನಾಯಕರು ಕೂಡ ಈ ಬಗ್ಗೆ ಅಧಿಕಾರಿಗಳ ಗಮನ ಸೆಳೆದಿದ್ದರಿಂದ, ಅಧಿಕಾರಿಗಳು ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಹಾಗೂ ತಂಡದೊಂದಿಗೆ ಸಭೆ ನಡೆಸಿ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಬೈರೇಗೌಡ ಅವರು ಕೆರೆಗೆ ಕಸ ಸುರಿಯುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಈಗಾಗಲೇ ತುಂಬಿದ ತ್ಯಾಜ್ಯವನ್ನು ತೆಗೆದು ಸ್ವಚ್ಛಗೊಳಿಸಬೇಕೆಂದು ಒತ್ತಾಯಿಸಿದರು. ನಗರಸಭೆ ನಿರ್ಮಿಸುತ್ತಿರುವ ಟ್ರಂಚ್ ಕುರಿತು ಆತಂಕ ವ್ಯಕ್ತಪಡಿಸಿದ ರೈತ ಮುಖಂಡರು, ಇದರಿಂದ ಅಪಘಾತದ ಅಪಾಯ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು. ಅವರು ಸಿಸಿಟಿವಿ ಅಳವಡಿಕೆ, ಬೇಲಿ ನಿರ್ಮಾಣ ಮತ್ತು ಕಾನೂನು ಕ್ರಮದ ಮೂಲಕ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿದರು.
ಪೌರಾಯುಕ್ತೆ ಅಮೃತ ಅವರು ತಾತ್ಕಾಲಿಕವಾಗಿ ಟ್ರಂಚ್ ಮೂಲಕ ಟ್ರ್ಯಾಕ್ಟರ್ ಸಂಚಾರ ತಡೆಗಟ್ಟಲಾಗುತ್ತದೆ ಆದರೆ ಬೇಲಿ ನಿರ್ಮಾಣಕ್ಕೆ ಅಗತ್ಯ ಬಜೆಟ್ ಲಭ್ಯವಿಲ್ಲವೆಂದರು. ತಹಶೀಲ್ದಾರ್ ಗಗನ ಸಿಂಧು ಅವರು ಕಟ್ಟಡ ತ್ಯಾಜ್ಯ ಸುರಿಸಿದ ಟ್ರ್ಯಾಕ್ಟರ್‌ಗಳ ಸಂಖ್ಯೆಯನ್ನು ಸಂಗ್ರಹಿಸಿದ್ದು, ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಹಾಗೂ ಮುಂದಿನ ದಿನಗಳಲ್ಲಿ ಕೆರೆಗೆ ಕಸ ಸುರಿಯದಂತೆ ನಿಗಾವಹಿಸಲಾಗುವುದು ಎಂದು ಭರವಸೆ ನೀಡಿದರು.
ಸ್ಥಳೀಯ ರೈತ ಮುಖಂಡರಾದ ಬಿ.ನಾರಾಯಣಸ್ವಾಮಿ, ವೇಣುಗೋಪಾಲ್, ತಾದೂರು ಮಂಜುನಾಥ್, ಹಯ್ಯಾತ್ ಖಾನ್ ಸೇರಿದಂತೆ ಹಲವು ಮಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.