
Sidlaghatta : ಮಂಡ್ಯದ ಮದ್ದೂರಿನಲ್ಲಿ ಗಣೇಶೋತ್ಸವ ಮೆರವಣಿಗೆಯ ವೇಳೆ ನಡೆದ ಕಲ್ಲು ತೂರಾಟ ಮತ್ತು ಎಂಜಲು ಉಗುಳಿದ ಘಟನೆಗೆ ಸಂಬಂಧಿಸಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಜರುಗಿಸಬೇಕೆಂದು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಚೆಲುವರಾಜ್ ಒತ್ತಾಯಿಸಿದರು.
ನಗರದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಸೋಮವಾರ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗ ದಳದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಅವರು ಮಾತನಾಡಿದರು. ಗಣೇಶ ಹಬ್ಬವು ಹಿಂದೂಗಳ ಆಧ್ಯಾತ್ಮಿಕ ಹಾಗೂ ಭಾವನಾತ್ಮಕ ಹಬ್ಬವಾಗಿದ್ದು, ಸಾರ್ವಜನಿಕ ಉತ್ಸವದ ರೂಪವನ್ನು ಶ್ರೀ ಬಾಲಗಂಗಾಧರ ತಿಲಕ್ ನೀಡಿದ ಬಳಿಕ ಇದು ಜನಸಾಮಾನ್ಯರ ಏಕತೆಗಾಗಿ ಆಚರಿಸಲಾಗುತ್ತಿದೆ ಎಂದು ಅವರು ಸ್ಮರಿಸಿದರು. ಇಂತಹ ಹಬ್ಬಕ್ಕೆ ಅಡ್ಡಿಯಾಗುವ ಘಟನೆಗಳು ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆ ತರುತ್ತವೆ ಎಂದು ಹೇಳಿದರು.
ರಾಜ್ಯ ಸರ್ಕಾರ ಮುಸ್ಲಿಂ ಸಮುದಾಯದ ಪರವಾಗಿ ಅತಿಯಾದ ಓಲೈಕೆ ಮಾಡುತ್ತಿದೆ ಎಂಬ ಆರೋಪ ಹೊರಿಸಿದ ಅವರು, ಧರ್ಮಗಳ ನಡುವೆ ವೈಷಮ್ಯ ಉಂಟಾಗುವುದು ಅಭಿವೃದ್ದಿಗೆ ಮಾರಕ ಎಂದು ಎಚ್ಚರಿಸಿದರು. ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ತಹಸೀಲ್ದಾರ್ ಗಗನ ಸಿಂಧೂ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ವೇಳೆ ಭಜರಂಗ ದಳ ಸಂಯೋಜಕ ವೆಂಕೋಬರಾವ್, ವಿಶ್ವ ಹಿಂದೂ ಪರಿಷತ್ ಸಹಕಾರ್ಯದರ್ಶಿ ನರೇಶ್‌ಯಾದವ್, ಡಿ.ಆರ್.ನಾರಾಯಣಸ್ವಾಮಿ, ಮಹೇಶ್, ರಮೇಶ್ ಹಾಗೂ ಜಯಂತಿಗ್ರಾಮ ನಾರಾಯಣಸ್ವಾಮಿ ಸೇರಿದಂತೆ ಹಲವರು ಹಾಜರಿದ್ದರು.