
Sidlaghatta : ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯನವರ ಪರಿಶ್ರಮದಿಂದಲೇ ಚಿಕ್ಕಬಳ್ಳಾಪುರ ಮತ್ತು ಕೋಲಾರ ನಡುವೆ ನ್ಯಾರೋ ಗೇಜ್ ರೈಲು ಮಾರ್ಗ ಆರಂಭವಾಯಿತು ಎಂದು ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ರೂಪಸಿ ರಮೇಶ್ ನೆನಪಿಸಿಕೊಂಡರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ಆಯೋಜಿಸಲಾದ “ಕನ್ನಡ ನಡೆ ಶಾಲೆಗಳ ಕಡೆ” ಅಭಿಯಾನದಡಿ ನಡೆದ ವಿಶ್ವೇಶ್ವರಯ್ಯ ಜಯಂತಿ ಮತ್ತು ಉತ್ತಮ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಶ್ವೇಶ್ವರಯ್ಯನವರ ಕೊಡುಗೆ ಇಡೀ ಜಗತ್ತಿಗೂ ಹರಡಿದೆಯಾದರೂ, ತಮ್ಮ ಹುಟ್ಟೂರಿನಲ್ಲಿ ನದಿ-ನಾಲೆಗಳಿಲ್ಲದ ಕಾರಣ ಅವರಿಗೆ ನೋವು ಉಂಟಾಗುತ್ತಿತ್ತು. ಕೊನೆಗೆ ಮೈಸೂರು ಮಹಾರಾಜರನ್ನು ಮನವೊಲಿಸಿ ತಮ್ಮ ಹುಟ್ಟೂರಿಗೆ ರೈಲು ಮಾರ್ಗವನ್ನು ತಂದರು ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಜಿಲ್ಲಾಧ್ಯಕ್ಷ ಎಸ್.ವಿ. ನಾಗರಾಜ್‌ರಾವ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಬೆಳವಣಿಗೆಯ ಹಾದಿ, ಅದರ ಕೊಡುಗೆ ಮತ್ತು ಕನ್ನಡ ನಾಡು-ನುಡಿ-ನೆಲ-ಜಲ ರಕ್ಷಣೆಯ ಅಗತ್ಯತೆಯನ್ನು ಒತ್ತಿ ಹೇಳಿದರು. ಕನ್ನಡಿಗರು ಜಾತಿ, ಧರ್ಮ, ಪಕ್ಷ ಭೇದಗಳನ್ನು ಮೀರಿಸಿ ಕನ್ನಡಕ್ಕಾಗಿ ಒಗ್ಗೂಡಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸರ್.ಎಂ. ವಿಶ್ವೇಶ್ವರಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸಲಾಯಿತು. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕರಾದ ನಾಗರತ್ನಮ್ಮ, ಎಚ್. ತಾಜೂನ್, ಕೆ. ಬೃಂದ, ಎಂ. ವೆಂಕಟರೆಡ್ಡಿ, ಎಂ.ಕೆ. ಸಿದ್ದರಾಜು, ಬಿ. ಮುನಿರಾಜು, ಎಸ್.ವಿ. ಅಮರನಾಥ್, ಜಿ. ಲತಾ, ಎಂ. ಮುನಿಯಪ್ಪ ಮತ್ತು ವೆಂಕಟಲಕ್ಷ್ಮಮ್ಮ ಅವರಿಗೆ ಸನ್ಮಾನ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ, ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಸಿ. ವೆಂಕಟಶಿವಾರೆಡ್ಡಿ, ಎನ್‌ಎಸ್‌ಎಸ್ ಅಧಿಕಾರಿ ಎಚ್.ಸಿ. ಮುನಿರಾಜು ಹಾಗೂ ಗಣ್ಯರು ಹಾಜರಿದ್ದರು.