
Sidlaghatta : ಮಂಡ್ಯದ ಮದ್ದೂರಿನಲ್ಲಿ ಗಣೇಶೋತ್ಸವ ಮೆರವಣಿಗೆಯ ವೇಳೆ ಭಾಗವಹಿಸುತ್ತಿದ್ದವರ ಮೇಲೆ ಎಂಜಲು ಉಗುಳಿ, ಕಲ್ಲು ಎಸೆದ ಘಟನೆಗೆ ಖಂಡನೆ ವ್ಯಕ್ತಪಡಿಸಿ, ಶಿಡ್ಲಘಟ್ಟದಲ್ಲಿ ಸೆಪ್ಟೆಂಬರ್ 15ರಂದು ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗ ದಳದ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಲಿದೆ.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಚೆಲುವರಾಜ್ ಮಾತನಾಡಿ, “ಗಣೇಶೋತ್ಸವದ ವೇಳೆ ಒಂದು ಸಮುದಾಯದ ಮಕ್ಕಳು ಎಂಜಲು ಉಗಿದು ಕಲ್ಲು ತೂರಾಟ ನಡೆಸಿದ ಘಟನೆ ನಡೆಯಿತು. ರಾಜ್ಯದಲ್ಲಿ ಹಿಂದೂ ಧರ್ಮ, ಧಾರ್ಮಿಕ ಆಚರಣೆಗಳು ಮತ್ತು ಕೇಂದ್ರಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಸ್ಲಿಂ ಸಮುದಾಯವನ್ನು ಒಲಿಸಿಕೊಳ್ಳುವ ರಾಜಕೀಯ ಧಾವಂತ ಹೆಚ್ಚಾಗಿದೆ. ಇದರಿಂದ ಸಾಮರಸ್ಯಕ್ಕೆ ಧಕ್ಕೆಯಾಗಿದೆ” ಎಂದು ಆರೋಪಿಸಿದರು.
ಸೋಮವಾರ ತಾಲ್ಲೂಕು ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
ವಿಶ್ವ ಹಿಂದೂ ಪರಿಷತ್ ಸಹ ಕಾರ್ಯದರ್ಶಿ ನರೇಶ್ ಯಾದವ್ ಮಾತನಾಡಿ, “ನಮ್ಮ ಹೋರಾಟ ಯಾವುದೇ ಸಮುದಾಯ ಅಥವಾ ಧರ್ಮದ ವಿರುದ್ಧವಲ್ಲ. ಆದರೆ ಹಿಂದೂ ಧರ್ಮದ ಮೇಲೆ ನಡೆಯುತ್ತಿರುವ ದೌರ್ಜನ್ಯ, ದಬ್ಬಾಳಿಕೆಗಳ ವಿರುದ್ಧ. ಈಗಲೇ ಎದ್ದು ನಿಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಷ್ಟ ಹೆಚ್ಚಾಗಬಹುದು. ಹಿಂದೂಗಳು ಜಾಗೃತರಾಗಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಭಜರಂಗ ದಳ ಸಂಯೋಜಕ ವೆಂಕೋಬರಾವ್, ವಿಹಿಪಿ ಅಧ್ಯಕ್ಷ ಚೆಲುವರಾಜ್, ಸಹಕಾರ್ಯದರ್ಶಿ ನರೇಶ್ ಯಾದವ್, ಉಪಾಧ್ಯಕ್ಷ ಮಹೇಶ್, ರಮೇಶ್ ಹಾಗೂ ಪುರೋಹಿತ್ ಸಂಘದ ಪ್ರಮುಖ ಮಳಮಾಚನಹಳ್ಳಿ ನಾರಾಯಣಸ್ವಾಮಿ ಹಾಜರಿದ್ದರು.