Home News ಶ್ರಮದಾನಕ್ಕೆ ಸಿಗದ ಬೆಲೆ; ಶಾಮಣ್ಣಬಾವಿ ಸ್ವಚ್ಛಗೊಳಿಸಿದ ತ್ಯಾಜ್ಯ ರಸ್ತೆಯಲ್ಲೇ ಬಾಕಿ

ಶ್ರಮದಾನಕ್ಕೆ ಸಿಗದ ಬೆಲೆ; ಶಾಮಣ್ಣಬಾವಿ ಸ್ವಚ್ಛಗೊಳಿಸಿದ ತ್ಯಾಜ್ಯ ರಸ್ತೆಯಲ್ಲೇ ಬಾಕಿ

0
Shamanna Bavi with waste pile on the adjacent road

Sidlaghatta : ಯುವಕರು ಸೇರಿ ಕಲ್ಯಾಣಿ ಕಾಯೋ ಕೆಲಸ ಮಾಡಿದ್ದೇವೆ, ಆದರೆ ತೆಗೆದ ಕಸ ಸಾಗಿಸೋ ತಾಳ್ಮೆ ನಗರಸಭೆಗಿಲ್ಲವೇ?” – ಇದು ಶಿಡ್ಲಘಟ್ಟ ನಗರದ ಅಗ್ರಹಾರ ಬೀದಿಯ ನಿವಾಸಿಗಳ ನೇರ ಪ್ರಶ್ನೆ.

ಸುಮಾರು 350 ವರ್ಷಗಳ ಇತಿಹಾಸವಿರುವ, ನಗರದ ಸಾಂಸ್ಕೃತಿಕ ಪರಂಪರೆಯ ಕನ್ನಡಿಯಂತಿರುವ ಶಾಮಣ್ಣಬಾವಿಯನ್ನು ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಸ್ಥಳೀಯ ಯುವಕರು ಮತ್ತು ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಸಮಿತಿಯವರು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದ್ದರು. ಆದರೆ, ಅಂದು ಮೆಟ್ಟಿಲುಗಳ ಬಾವಿಯಿಂದ ತೆಗೆದು ರಸ್ತೆಯ ಪಕ್ಕದಲ್ಲಿ ಸುರಿದಿದ್ದ ಗಿಡಗಂಟೆಗಳು ಹಾಗೂ ತ್ಯಾಜ್ಯದ ರಾಶಿ ಮೂರು ತಿಂಗಳು ಕಳೆದರೂ ಹಾಗೆಯೇ ಬಿದ್ದಿದೆ.

ಮರುಜೀವ ಪಡೆಯುತ್ತಿರುವ ಕಳೆಗಳು: ತ್ಯಾಜ್ಯವನ್ನು ತೆರವುಗೊಳಿಸದ ಕಾರಣ, ರಸ್ತೆಯಲ್ಲೇ ಬಿದ್ದಿರುವ ಆ ಮಣ್ಣು ಮತ್ತು ಕಸದ ರಾಶಿಯ ಮೇಲೆ ಈಗ ಮತ್ತೆ ಹೊಸ ಗಿಡಗಳು ಬೆಳೆಯತೊಡಗಿವೆ. ಇದು ರಸ್ತೆ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿದೆ. “ನಾವು ನಮ್ಮ ಕೈಲಾದ ಕೆಲಸ ಮಾಡಿದ್ದೇವೆ. ನಗರಸಭೆಯವರು ಕನಿಷ್ಠ ಆ ಕಸವನ್ನು ದೂರ ಸಾಗಿಸಬೇಕಿತ್ತು,” ಎಂದು ಶ್ರಮದಾನದಲ್ಲಿ ಪಾಲ್ಗೊಂಡಿದ್ದ ಯುವಕರು ಅಳಲು ತೋಡಿಕೊಂಡಿದ್ದಾರೆ.

ಆಧ್ಯಾತ್ಮಿಕ ಮತ್ತು ಪ್ರಕೃತಿಯ ಸಂಗಮ: ಈ ಶಾಮಣ್ಣಬಾವಿ ಕೇವಲ ಬಾವಿಯಲ್ಲ, ಇದು ಆಧ್ಯಾತ್ಮಿಕ ಕೇಂದ್ರವೂ ಹೌದು. ಇಲ್ಲಿ ಒಂದೆಡೆ ಶ್ರೀಕಂಠೇಶ್ವರ (ಶಿವ) ಮತ್ತೊಂದೆಡೆ ಲಕ್ಷ್ಮೀನರಸಿಂಹಸ್ವಾಮಿ (ವಿಷ್ಣು) ನೆಲೆಸಿದ್ದಾರೆ. ಹರಿ-ಹರ ಒಂದೇ ಕಡೆ ಕಾಣಸಿಗುವ ಅಪರೂಪದ ತಾಣವಿದು. ಸುತ್ತಲೂ ಅರಳಿ, ಹುಣಸೆ, ತೆಂಗಿನ ಮರಗಳಿದ್ದು, ಹಿಂದೆ ಇದು ನಗರದ ಯುವಕರಿಗೆ ಈಜು ಕಲಿಯುವ ಪ್ರಮುಖ ಕೇಂದ್ರವಾಗಿತ್ತು.

ಶಾಮಣ್ಣಬಾವಿಯಲ್ಲಿ ನೀರು ನಿಂತರೆ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಅಂತರ್ಜಲ ವೃದ್ಧಿಯಾಗಿ ಕೊಳವೆಬಾವಿಗಳಲ್ಲಿ ನೀರು ಸಿಗುತ್ತದೆ. ಇಂತಹ ಅಮೂಲ್ಯ ಆಸ್ತಿಯನ್ನು ಉಳಿಸಿಕೊಳ್ಳಲು ಯುವಕರು ಮುಂದಾಗಿದ್ದರೂ, ಸ್ಥಳೀಯ ಆಡಳಿತದ ಅಸಹಕಾರ ಭಕ್ತರಲ್ಲಿ ಬೇಸರ ತಂದಿದೆ. ಕೂಡಲೇ ನಗರಸಭೆಯವರು ಈ ತ್ಯಾಜ್ಯವನ್ನು ತೆರವುಗೊಳಿಸಬೇಕೆಂದು ಬಾಬು, ಸುಧಾಕರ್, ಸೂರಿ ಸೇರಿದಂತೆ ಹಲವು ಯುವಕರು ಆಗ್ರಹಿಸಿದ್ದಾರೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version