Home News ರೈತರಿಗೆ ಕೊಟ್ಟ ಮಾತು ಉಳಿಸಿಕೊಂಡ ಶಾಸಕ; KIADB ಭೂಸ್ವಾಧೀನದಿಂದ 471 ಎಕರೆ ಕೃಷಿ ಭೂಮಿ ಮುಕ್ತಿ

ರೈತರಿಗೆ ಕೊಟ್ಟ ಮಾತು ಉಳಿಸಿಕೊಂಡ ಶಾಸಕ; KIADB ಭೂಸ್ವಾಧೀನದಿಂದ 471 ಎಕರೆ ಕೃಷಿ ಭೂಮಿ ಮುಕ್ತಿ

0
MLA B N Ravikumar with M B Patil Discussing KIADB Farmers Land

Sidlaghatta : “ನಾನೂ ಒಬ್ಬ ರೈತನ ಮಗನಾಗಿ, ಕೃಷಿಯನ್ನೇ ನಂಬಿ ಬದುಕುತ್ತಿರುವ ರೈತರ ಕಷ್ಟ ನನಗೆ ತಿಳಿದಿದೆ. ಜಂಗಮಕೋಟೆ ಭಾಗದ ರೈತರಿಗೆ ಕೊಟ್ಟ ಮಾತಿನಂತೆ, ಪ್ರಾಥಮಿಕ ಅಧಿಸೂಚನೆಯಲ್ಲಿದ್ದ 471 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಹೊರತುಪಡಿಸುವಲ್ಲಿ ಯಶಸ್ವಿಯಾಗಿದ್ದೇನೆ,” ಎಂದು ಶಾಸಕ ಬಿ.ಎನ್.ರವಿಕುಮಾರ್ ಘೋಷಿಸಿದರು.

ಸೋಮವಾರ ಮೇಲೂರಿನ ತಮ್ಮ ಗೃಹಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಂಗಮಕೋಟೆ ಹೋಬಳಿಯ 13 ಹಳ್ಳಿಗಳಲ್ಲಿ ಕೈಗಾರಿಕಾ ಉದ್ದೇಶಕ್ಕಾಗಿ ಸುಮಾರು 2,823 ಎಕರೆ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಇದರಿಂದ ಆತಂಕಕ್ಕೊಳಗಾಗಿದ್ದ ರೈತರು, ತಮ್ಮ ಹಸಿರು ಭೂಮಿಯನ್ನು ಉಳಿಸಿಕೊಡುವಂತೆ ಮನವಿ ಮಾಡಿದ್ದರು.

ಸಚಿವರ ಮನವೊಲಿಸಿದ ಶಾಸಕರು: ರೈತರ ಪರವಾಗಿ ನಿಂತ ಶಾಸಕರು, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಅವರನ್ನು ಹಲವು ಬಾರಿ ಭೇಟಿ ಮಾಡಿ ಮನವಿ ಮಾಡಿದ್ದರು. ನಡಿಪಿನಾಯಕನಹಳ್ಳಿ, ಯಣ್ಣಂಗೂರು, ತಾದೂರು, ಬಸವಾಪಟ್ಟಣ ಮುಂತಾದ ಗ್ರಾಮಗಳಲ್ಲಿ ರೈತರು ರೇಷ್ಮೆ, ಮಾವು ಮತ್ತು ದ್ರಾಕ್ಷಿಯಂತಹ ಲಾಭದಾಯಕ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಕೇವಲ ಒಂದು ಅಥವಾ ಎರಡು ಎಕರೆ ಹೊಂದಿರುವ ಸಣ್ಣ ರೈತರ ಬದುಕು ಹಸನಾಗಿರಲು ಈ ಭೂಮಿ ಅಗತ್ಯ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದರು.

ಪ್ರಾಮಾಣಿಕ ಪ್ರಯತ್ನಕ್ಕೆ ಸಂದ ಜಯ: “ಕೆಐಎಡಿಬಿ ಯೋಜನೆಯನ್ನು ತರಲು ಅಥವಾ ಪೂರ್ಣವಾಗಿ ನಿಲ್ಲಿಸಲು ನನಗೇನು ಅತಿಮಾನುಷ ಶಕ್ತಿಯಿಲ್ಲ. ಆದರೆ, ಒಬ್ಬ ಜನಪ್ರತಿನಿಧಿಯಾಗಿ ರೈತರ ನೋವಿಗೆ ಸ್ಪಂದಿಸಿ, ಅಧಿಕಾರಿಗಳು ಮತ್ತು ಸಚಿವರನ್ನು ಮನವೊಲಿಸುವಲ್ಲಿ ನಾನು ಮಾಡಿದ ಪ್ರಾಮಾಣಿಕ ಪ್ರಯತ್ನಕ್ಕೆ ಈಗ ಪ್ರತಿಫಲ ಸಿಕ್ಕಿದೆ,” ಎಂದು ರವಿಕುಮಾರ್ ತಿಳಿಸಿದರು. ಕೃಷಿ ಭೂಮಿಯನ್ನು ಉಳಿಸಿಕೊಡಲು ಸಹಕರಿಸಿದ ಸಚಿವ ಎಂ.ಬಿ. ಪಾಟೀಲ್ ಮತ್ತು ಡಾ.ಎಂ.ಸಿ. ಸುಧಾಕರ್ ಅವರಿಗೆ ಶಾಸಕರು ಅಭಿನಂದನೆ ಸಲ್ಲಿಸಿದರು.

KIADB ಯಿಂದ ಮುಕ್ತವಾದ ಜಮೀನುಗಳ ವಿವರ :

ಸಂಜೀವಪುರ (5 ಎಕರೆ), ತೊಟ್ಲಗಾನಹಳ್ಳಿ (3 ಎಕರೆ), ಬಸವಾಪಟ್ಟಣ (9-07 ಎಕರೆ), ಹೊಸಪೇಟೆ (27-35 ಎಕರೆ), ಚೊಕ್ಕೊಂಡನಹಳ್ಳಿ (3-18 ಎಕರೆ), ಯದ್ದಲತಿಪ್ಪೇನಹಳ್ಳಿ (10-25 ಎಕರೆ), ಕೊಲಿಮೆಹೊಸೂರು (9 ಎಕರೆ), ನಡಿಪಿನಾಯಕನಹಳ್ಳಿ (220-12 ಎಕರೆ), ತಾದೂರು (27-08 ಎಕರೆ), ಯಣ್ಣಂಗೂರು (111-07 ಎಕರೆ), ದೇವಗಾನಹಳ್ಳಿ (37-22 ಎಕರೆ), ಗೊಲ್ಲಹಳ್ಳಿ (5-39 ಎಕರೆ) ಸೇರಿದಂತೆ ಒಟ್ಟಾರೆ 471 ಎಕರೆ 21 ಗುಂಟೆ ಕೃಷಿ ಜಮೀನನ್ನು ಭೂಸ್ವಾಧೀನದಿಂದ ಹೊರತುಪಡಿಸಲಾಗಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version