
Sidlaghatta : “ಶಿಡ್ಲಘಟ್ಟ ಕ್ಷೇತ್ರವು ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದು, ಮುಂಬರುವ ಚಿಮುಲ್ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಬಾರಿಸುವುದು ಶತಸಿದ್ಧ,” ಎಂದು ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಹಮ್ಮಿಕೊಂಡಿದ್ದ ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದ (ಚಿಮುಲ್) ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಜೆಡಿಎಸ್ ಮತ್ತು ಬಿಜೆಪಿಯ ಮೈತ್ರಿಯನ್ನು ಸಮರ್ಥವಾಗಿ ಎದುರಿಸಲು ಪಕ್ಷದ ಕಾರ್ಯಕರ್ತರು ಸನ್ನದ್ಧರಾಗಬೇಕು ಎಂದು ತಿಳಿಸಿದರು.
ಬಣ ರಾಜಕೀಯಕ್ಕೆ ತಿಲಾಂಜಲಿ: “ಹಿಂದಿನ ಚುನಾವಣೆಗಳಲ್ಲಿ ನಮ್ಮಲ್ಲಿನ ಸಣ್ಣಪುಟ್ಟ ಬಣ ರಾಜಕೀಯದಿಂದ ಸೋಲು ಅನುಭವಿಸಿರಬಹುದು. ಆದರೆ ಈಗ ಆ ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ತಾಯಿಯಂತಹ ಕಾಂಗ್ರೆಸ್ ಪಕ್ಷಕ್ಕೆ ಗೆಲುವು ತಂದುಕೊಡಬೇಕು,” ಎಂದು ರಾಜೀವ್ ಗೌಡ ಮನವಿ ಮಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನ ರಾಜೀವ್ ಮಾತನಾಡಿ, “ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ಎಲ್ಲವೂ ಸರಿಯಾಗಿದೆ. ಒಗ್ಗಟ್ಟಿನಿಂದ ಅಭ್ಯರ್ಥಿಗಳನ್ನು ಗೆಲ್ಲಿಸಿ ಚಿಮುಲ್‌ಗೆ ಕಳುಹಿಸೋಣ,” ಎಂದರು.
ರೈತರ ಹಿತವೇ ಮುಖ್ಯ: ಮುಖಂಡ ಪುಟ್ಟು ಆಂಜಿನಪ್ಪ ಮಾತನಾಡಿ, “ಇದು ಕೇವಲ ರಾಜಕೀಯ ಚುನಾವಣೆಯಲ್ಲ, ನೇರವಾಗಿ ರೈತರ ಬದುಕಿಗೆ ಸಂಬಂಧಿಸಿದ ಸಹಕಾರ ಕ್ಷೇತ್ರದ ಚುನಾವಣೆ. ರೈತರ ಹಿತದೃಷ್ಟಿಯಿಂದ ಸೂಕ್ತ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುವುದು,” ಎಂದು ತಿಳಿಸಿದರು.
ಸಭೆಯಲ್ಲಿ ಆಕಾಂಕ್ಷಿ ಅಭ್ಯರ್ಥಿಗಳಾದ ಆರ್.ಶ್ರೀನಿವಾಸ್, ಕೆ.ಗುಡಿಯಪ್ಪ, ಪ್ರದೀಪ್ ಕುಮಾರ್ ಸೇರಿದಂತೆ ಹಲವರ ಹೆಸರುಗಳು ಪ್ರಸ್ತಾಪವಾದವು. ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಮಾಲೋಚಿಸಿ ಅಂತಿಮ ಪಟ್ಟಿ ಸಿದ್ಧಪಡಿಸಲು ನಿರ್ಧರಿಸಲಾಯಿತು.