
Sidlaghatta : ಶಿಡ್ಲಘಟ್ಟ ನಗರದ ಕನಕನಗರ ಸಮೀಪದಲ್ಲಿರುವ ಹಿಂದೂ ರುದ್ರಭೂಮಿಯು (Hindu Burial Ground Shidlaghatta) ಸಂಪೂರ್ಣ ದುಸ್ಥಿತಿಗೆ ತಲುಪಿದ್ದು, ಇದನ್ನು ಬಳಕೆಗೆ ಯೋಗ್ಯವಾಗುವಂತೆ ದುರಸ್ತಿ ಮಾಡಿಕೊಡುವಂತೆ ವಿವಿಧ ಸಮುದಾಯಗಳ ಪ್ರಮುಖರು ಶಾಸಕ ಬಿ.ಎನ್. ರವಿಕುಮಾರ್ ಅವರಲ್ಲಿ ಮನವಿ ಸಲ್ಲಿಸಿದ್ದಾರೆ. ಗಿಡಗಂಟೆಗಳು ಬೆಳೆದಿರುವ, ಶೌಚಾಲಯ ಮತ್ತು ಸ್ನಾನಗೃಹಗಳು ಹಾಳಾಗಿ ನೀರಿನ ಸಂಪರ್ಕ ಕಡಿತಗೊಂಡಿರುವ ರುದ್ರಭೂಮಿಯಲ್ಲಿ ಶವ ಸಂಸ್ಕಾರ (Shava Samskara) ಮಾಡಲು ತೀವ್ರ ತೊಂದರೆಯಾಗುತ್ತಿದೆ ಎಂದು ಸಮುದಾಯದ ಮುಖಂಡರು ದೂರಿದ್ದಾರೆ.
ಶಿಡ್ಲಘಟ್ಟ-ಚಿಕ್ಕಬಳ್ಳಾಪುರ ಮಾರ್ಗದಲ್ಲಿರುವ ಈ ರುದ್ರಭೂಮಿಯ ಕಾಂಪೌಂಡ್ ಬಿದ್ದು ಹೋಗಿದ್ದು, ಆವರಣದಲ್ಲಿ ಹುಳು-ಉಪ್ಪಟೆಗಳು ಸೇರಿಕೊಂಡಿವೆ. ಈ ಸಮಸ್ಯೆಗಳನ್ನು ನಿವಾರಿಸಿ, ರುದ್ರಭೂಮಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಎ.ಎಸ್. ರವಿ ಮತ್ತು ಆರ್ಯ ವೈಶ್ಯ ಮಂಡಳಿಯ ಅಧ್ಯಕ್ಷ ಮಹೇಶ್ ಬಾಬು ಸೇರಿದಂತೆ ಹಲವರು ಮೇಲೂರು ಗ್ರಾಮದ ಗೃಹ ಕಚೇರಿಯಲ್ಲಿ ಶಾಸಕರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.
ಸಮುದಾಯದ ಪ್ರಮುಖರ ಅಹವಾಲುಗಳನ್ನು ಆಲಿಸಿದ ಶಾಸಕ ಬಿ.ಎನ್. ರವಿಕುಮಾರ್ (MLA BN Ravikumar Shidlaghatta) ಅವರು, ಕೂಡಲೇ ರುದ್ರಭೂಮಿಯ ಸ್ಥಳ ಪರಿಶೀಲನೆ ನಡೆಸುವುದಾಗಿ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ರುದ್ರಭೂಮಿಯನ್ನು ಸಂಪೂರ್ಣವಾಗಿ ದುರಸ್ತಿಪಡಿಸಿ, ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಎಸ್.ವಿ. ನಾಗರಾಜ್ ರಾವ್, ಅರ್ಚಕ ವೈ.ಎನ್. ದಾಶರಥಿ ಭಟ್ಟಾಚಾರ್ಯ, ನಾಗರಾಜಶರ್ಮ ರಾಜೇಶ್ ಸೇರಿದಂತೆ ವಿವಿಧ ಪ್ರಮುಖರು ಹಾಜರಿದ್ದರು.