
Kothanur, Sidlaghatta : “ಒತ್ತಡದ ಬದುಕಿನಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಉತ್ತಮ ಜೀವನ ನಡೆಸಲು ದಾರಿದೀಪವಾಗುತ್ತವೆ,” ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಸಿ.ಎಸ್.ಪ್ರಶಾಂತ್ ತಿಳಿಸಿದರು.
ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಶ್ರೀದೇವಿ ಭೂದೇವಿ ಸಮೇತ ಶ್ರೀ ಚನ್ನಕೇಶವಸ್ವಾಮಿ ದೇವಾಲಯಕ್ಕೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ವತಿಯಿಂದ ಮಂಜೂರಾದ 2.5 ಲಕ್ಷ ರೂ.ಗಳ ಡಿಡಿಯನ್ನು ದೇವಾಲಯದ ಅಭಿವೃದ್ಧಿ ಟ್ರಸ್ಟ್‌ಗೆ ಹಸ್ತಾಂತರಿಸಿ ಅವರು ಮಾತನಾಡಿದರು.
ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದರಿಂದ ಅಹಂಕಾರ ಮತ್ತು ಕೋಪ ಕಡಿಮೆಯಾಗಿ ಸಮಾಜದಲ್ಲಿ ಸೌಹಾರ್ದತೆಯಿಂದ ಬದುಕುವ ವಾತಾವರಣ ನಿರ್ಮಾಣವಾಗಲಿದೆ. ಇಂತಹ ಪವಿತ್ರ ಕಾರ್ಯಗಳಿಗೆ ಧರ್ಮಸ್ಥಳದ ವತಿಯಿಂದ ಬೆಂಬಲ ನೀಡುತ್ತಿರುವುದು ಹೆಮ್ಮೆಯ ವಿಷಯ ಎಂದು ಅವರು ಆಶಯ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಯೋಜನೆಯ ಸಮಾಜಮುಖಿ ಕಾರ್ಯಗಳನ್ನು ವಿವರಿಸಿದ ಪ್ರಶಾಂತ್ ಅವರು, “ಈ ವರ್ಷ ಜಿಲ್ಲೆಯ 42 ಸರ್ಕಾರಿ ಶಾಲೆಗಳಿಗೆ 33 ಲಕ್ಷ ರೂ. ಮೌಲ್ಯದ 350 ಡೆಸ್ಕ್ ನೀಡಲಾಗಿದೆ. ಅಗತ್ಯವಿರುವ ಶಾಲೆಗಳಿಂದ ಶೇ. 10ರಷ್ಟು ವಂತಿಗೆ ಪಡೆದು ಉಳಿದ ಹಣವನ್ನು ಯೋಜನೆಯೇ ಭರಿಸಿದೆ,” ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಯೋಜನಾಧಿಕಾರಿ ಪ್ರಸಾದ್, ಪಿಡಿಒ ಪವಿತ್ರ, ಪ್ರಧಾನ ಅರ್ಚಕ ಚನ್ನಕೇಶವ ಚಾರ್ ಸೇರಿದಂತೆ ದೇವಾಲಯದ ಸಮಿತಿ ಸದಸ್ಯರು ಮತ್ತು ಗ್ರಾಮಸ್ಥರು ಹಾಜರಿದ್ದರು.