Sidlaghatta : ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ 21.36 ಲಕ್ಷ ರೂಪಾಯಿ ವಂಚಿಸಿದ ವ್ಯಕ್ತಿಯನ್ನು ಶಿಡ್ಲಘಟ್ಟ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೋಲಾರ ಜಿಲ್ಲೆಯ ವೇಮಗಲ್ ಹೋಬಳಿ ತೋಕಲಘಟ್ಟ ಗ್ರಾಮದ ಅನಿಲ್ ಕುಮಾರ್ ಬಂಧಿತ ಆರೋಪಿ.
ತಾಲ್ಲೂಕಿನ ಜಂಗಮಕೋಟೆಯ ಗೋಪಾಲಕೃಷ್ಣ ಅವರಿಗೆ ಪರಿಚಯವಾಗಿದ್ದ ಅನಿಲ್ ಕುಮಾರ್, ತಾನು ಕೆಪಿಎಸ್‌ಸಿಯಲ್ಲಿ ಪ್ರಮುಖ ಹುದ್ದೆಯಲ್ಲಿದ್ದೇನೆ, ನಿಮ್ಮ ಮಗನಿಗೆ ಸರ್ಕಾರಿ ನೌಕರಿ ಕೊಡಿಸುತ್ತೇನೆ ಎಂದು ನಂಬಿಸಿ, ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 21,36,000 ರೂ. ಪಡೆಯುತ್ತಿದ್ದ. ಆದರೆ, ವಾಗ್ದಾನ ಮಾಡಿದಂತೆ ನೌಕರಿ ಕೊಡಿಸದ ಕಾರಣ ಗೋಪಾಲಕೃಷ್ಣ ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದರು.
ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಅನಿಲ್ ಕುಮಾರ್‌ನ್ನು ಹೊಸಕೋಟೆ ತಾಲ್ಲೂಕಿನ ಮಲ್ಲಿಮಾಕಲಹಳ್ಳಿ ಬಳಿ ಬಂಧಿಸಿ ವಿಚಾರಣೆ ನಡೆಸಿದರು. ವಿಚಾರಣೆ ವೇಳೆ, ಪಡೆದ ಹಣವನ್ನು ಆನ್‌ಲೈನ್ ಬೆಟ್ಟಿಂಗ್ ಮತ್ತು ಜೂಜಿನಲ್ಲಿ ಕಳೆದುಕೊಂಡಿರುವುದಾಗಿ ಆರೋಪಿಯು ಒಪ್ಪಿಕೊಂಡಿದ್ದಾನೆ.
ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾದ ಆರೋಪಿ ವಿರುದ್ಧ ಹೆಚ್ಚಿನ ತನಿಖೆ ಮುಂದುವರಿದಿದೆ. ಈ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿದ ಎಸ್‌ಐ ಕೆ.ಸತೀಶ್ ಹಾಗೂ ಸಿಬ್ಬಂದಿ ಸಂದೀಪ್ ಕುಮಾರ್, ವೆಂಕಟೇಶ್ ಮತ್ತು ಮಂಜುನಾಥ್ ಅವರ ಕಾರ್ಯಕ್ಷಮತೆಯನ್ನು ಎಸ್ಪಿ ಕುಶಲ್ ಚೌಕ್ಸೆ ಪ್ರಶಂಸಿಸಿದ್ದಾರೆ.
For Daily Updates WhatsApp ‘HI’ to 7406303366
