Home News ಶಿಡ್ಲಘಟ್ಟದ ರೈತನ ಹೊಲದಲ್ಲಿ ಅಮೆರಿಕದ ‘ಸೂಪರ್ ಫುಡ್’ ಬಣ್ಣದ ಜೋಳ

ಶಿಡ್ಲಘಟ್ಟದ ರೈತನ ಹೊಲದಲ್ಲಿ ಅಮೆರಿಕದ ‘ಸೂಪರ್ ಫುಡ್’ ಬಣ್ಣದ ಜೋಳ

0

Appegowdanahalli, Sidlaghatta : ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ರೈತ ಎ.ಎಂ. ತ್ಯಾಗರಾಜ್ ತಮ್ಮ ಹೊಲದಲ್ಲಿ ಕೆಂಪು, ನೀಲಿ, ನೇರಳೆ ಮತ್ತು ಕಪ್ಪು ಬಣ್ಣದ ಮೆಕ್ಕೆಜೋಳವನ್ನು ಯಶಸ್ವಿಯಾಗಿ ಬೆಳೆದು ಗಮನ ಸೆಳೆದಿದ್ದಾರೆ. ಸಾಮಾನ್ಯ ಹಳದಿ ಅಥವಾ ಬಿಳಿ ಜೋಳಕ್ಕೆ ಕೃತಕ ಬಣ್ಣ ಬಳಿದ ಪ್ರಭೇದಗಳಲ್ಲದೆ, ವಾಸ್ತವದಲ್ಲೇ ಬಣ್ಣಗಳ ವೈವಿಧ್ಯ ಹೊಂದಿರುವ ಈ ಜೋಳವನ್ನು ಮೆಕ್ಸಿಕೋ ಹಾಗೂ ಪೆರು ದೇಶಗಳಿಂದ ತಂದ ಬಿತ್ತನೆ ಬೀಜಗಳಿಂದ ಬೆಳೆಸಿದ್ದಾರೆ.

ಹತ್ತು ಗುಂಟೆ ಜಮೀನಿನಲ್ಲಿ ನಾಲ್ಕು ತಿಂಗಳ ಹಿಂದೆ ನಾಟಿ ಮಾಡಿದ ಈ ಜೋಳಕ್ಕೆ ಸಾವಯವ ಗೊಬ್ಬರವನ್ನು ಬಳಸಿ ಬೆಳೆಸಲಾಗಿದ್ದು, ಪ್ರತಿ ಗಿಡಕ್ಕೆ ಎರಡು-ಮೂರು ತೆನೆ ಬಿಡುವುದರಿಂದ ಉತ್ತಮ ಇಳುವರಿ ದೊರೆತಿದೆ. ಪ್ರಸ್ತುತ ಸುಮಾರು 150 ಕೆ.ಜಿ. ಕಾಳುಗಳನ್ನು ತ್ಯಾಗರಾಜ್ ಪಡೆದುಕೊಂಡಿದ್ದು, ಸುತ್ತಮುತ್ತಲಿನ ರೈತರು ಈ ವಿಶೇಷ ಬೆಳೆ ನೋಡಲು ಆಗಮಿಸುತ್ತಿದ್ದಾರೆ.

ಇತಿಹಾಸದಲ್ಲೇ 3000 ವರ್ಷಗಳ ಹಿಂದೆ ದಕ್ಷಿಣ ಅಮೆರಿಕದಲ್ಲಿ ಬೆಳೆದಿದ್ದ ಈ ಬಣ್ಣದ ಜೋಳಗಳು, ಅಲ್ಲಿ ಜನರ ಮುಖ್ಯ ಆಹಾರವಾಗಿದ್ದವು. ಮಿಜೋರಾಂ ರಾಜ್ಯದಲ್ಲಿಯೂ ಇಂದಿಗೂ ಈ ಜೋಳಗಳನ್ನು ‘ಮಿಮ್ ಬಾನ್’ ಎಂದು ಕರೆಯುತ್ತಾ ಆಹಾರವಾಗಿ ಬಳಸುತ್ತಾರೆ. ಸಿಹಿ ಮತ್ತು ಒಗರಿನ ರುಚಿಯುಳ್ಳ ಈ ಜೋಳದಲ್ಲಿ ಕಬ್ಬಿಣಾಂಶ, ವಿಟಮಿನ್‌ಗಳು ಹಾಗೂ ಆಂಥೋಸಯಾನಿನ್‌ಗಳಂತಹ ಪೋಷಕಾಂಶಗಳು ಸಮೃದ್ಧವಾಗಿದ್ದು, ರಕ್ತಹೀನತೆ ನಿವಾರಣೆ, ಮಧುಮೇಹ ನಿಯಂತ್ರಣ, ಉರಿಯೂತ ಕಡಿಮೆಗೊಳಿಸುವುದರ ಜೊತೆಗೆ ನರಮಂಡಲ ಮತ್ತು ಕಣ್ಣಿನ ಆರೋಗ್ಯಕ್ಕೂ ಸಹಕಾರಿ ಎಂದು ತಿಳಿದುಬಂದಿದೆ.

ಪೆರು ದೇಶದಲ್ಲಿ ಈ ಬಣ್ಣದ ಜೋಳದಿಂದ ಚೀಚಾ ಮೊರಾಡ ಎಂಬ ಪಾನೀಯ ತಯಾರಿಸಲಾಗುತ್ತಿದ್ದು, ಜಾಗತಿಕವಾಗಿ “ಸೂಪರ್ ಫುಡ್” ಎಂದು ಪ್ರಸಿದ್ಧಿ ಪಡೆದಿದೆ. “ಈ ತಳಿಯನ್ನು ಅಭಿವೃದ್ಧಿ ಪಡಿಸಿ, ನಮ್ಮ ಭಾಗದ ರೈತರಿಗೆ ಪರಿಚಯಿಸುವುದು ನನ್ನ ಉದ್ದೇಶ. ಮಾರುಕಟ್ಟೆಯಲ್ಲಿ ಸಹ ಇವುಗಳಿಗೆ ಉತ್ತಮ ಬೇಡಿಕೆ ಇದೆ” ಎಂದು ರೈತ ತ್ಯಾಗರಾಜ್ ಅಭಿಪ್ರಾಯಪಟ್ಟರು.

For Daily Updates WhatsApp ‘HI’ to 7406303366

Namma Sidlaghatta WhatsApp Channel

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version