Home News ಗುಣಿ ಪದ್ಧತಿಯ ರಾಗಿ: ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಇಳುವರಿ

ಗುಣಿ ಪದ್ಧತಿಯ ರಾಗಿ: ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಇಳುವರಿ

0
Sidlaghatta Farmer Bumper Crop Guni Method Ragi Farming

Sidlaghatta, Chikkaballapur : ಶಿಡ್ಲಘಟ್ಟ ತಾಲ್ಲೂಕಿನ ಬೂದಾಳ ಗ್ರಾಮದ ರೈತ ರಾಮಾಂಜಿನಪ್ಪ ಅವರು ಗುಣಿ ಪದ್ಧತಿಯನ್ನು ಅಳವಡಿಸಿಕೊಂಡು ರಾಗಿ ಬೆಳೆದಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾರೆ. ಕಡಿಮೆ ನೀರು, ಕಡಿಮೆ ಬಂಡವಾಳ ಮತ್ತು ವಿಜ್ಞಾನಾಧಾರಿತ ಕೃಷಿ ಪದ್ಧತಿಯ ಬಳಕೆ ಮೂಲಕ ಉತ್ತಮ ಗುಣಮಟ್ಟದ ರಾಗಿ ಹಾಗೂ ಹೆಚ್ಚಿನ ಇಳುವರಿಯನ್ನು ಪಡೆಯಬಹುದೆಂಬುದನ್ನು ತಮ್ಮ ಹೊಲದಲ್ಲೇ ಸಾಬೀತು ಮಾಡಿದ್ದಾರೆ.

ಸಾಂಪ್ರದಾಯಿಕವಾಗಿ ಒಂದು ಎಕರೆ ಭೂಮಿಗೆ 1 ಕೆಜಿ ರಾಗಿಯನ್ನು ನೇರವಾಗಿ ಬಿತ್ತನೆ ಮಾಡುವ ಪದ್ಧತಿ ಇದ್ದರೂ, ಗುಣಿ ಪದ್ಧತಿಯಲ್ಲಿ MR-6 ತಳಿಯ ಕೇವಲ 40 ಗ್ರಾಂ ರಾಗಿಯನ್ನು ನೀರಿನಲ್ಲಿ ನೆನೆಸಿಕೊಂಡು ನರ್ಸರಿ ವಿಧಾನದಲ್ಲಿ ಗಿಡ ಬೆಳೆಯಲಾಗುತ್ತದೆ. 20 ದಿನಗಳ ನಂತರ ಪೈರನ್ನು ಹೊಲಕ್ಕೆ ನಾಟಿ ಮಾಡಲಾಗುತ್ತದೆ. ಒಂದು ಎಕರೆಗೆ 10,890 ಪೈರುಗಳ ಅಗತ್ಯವಿದ್ದು, 1.5×1.5 ಅಡಿ ಅಂತರದಲ್ಲಿ ಅರೆ ಅಡಿ ಆಳದ ಗುಣಿಗಳನ್ನು ತೆಗೆದು ಕೊಟ್ಟಿಗೆ ಗೊಬ್ಬರ, ಎರೆಹುಳು ಗೊಬ್ಬರ, ಝಿಂಕ್, ಬೋರಾನ್ ಸೇರಿದಂತೆ ಸೂಕ್ಷ್ಮಾಣು ಗೊಬ್ಬರವನ್ನು ಅಗತ್ಯಕ್ಕೆ ತಕ್ಕಂತೆ ಬಳಕೆ ಮಾಡಲಾಗುತ್ತದೆ. ಹನಿ ನೀರಾವರಿ ಪೈಪುಗಳನ್ನು ಅಳವಡಿಸುವುದರಿಂದ ನೀರಿನ ಬಳಕೆ ಕಡಿಮೆ ಆಗುತ್ತದೆ.

40 ದಿನಗಳ ನಂತರ ಪೈರನ್ನು ಬಗ್ಗಿಸುವ (tillering) ವಿಧಾನದಿಂದ ಒಂದು ಪೈರು 50 ರಿಂದ 60 ತೆನೆ ಹೊಡೆಯುವ ಸಾಮರ್ಥ್ಯ ಹೊಂದುತ್ತದೆ. ಸಾಮಾನ್ಯವಾಗಿ 10–15 ಕ್ವಿಂಟಾಲ್ ಇಳುವರಿ ಸಿಗುವ ರಾಗಿ ಬೆಳೆ, ಗುಣಿ ಪದ್ಧತಿ ಬಳಸಿ 30–35 ಕ್ವಿಂಟಾಲ್ ಬೆಳೆ ನೀಡುತ್ತದೆ. ಬೂದಾಳದ ರಾಮಾಂಜಿನಪ್ಪ ಅವರ ಹೊಲದಲ್ಲಿ ಈ ವರ್ಷ ಬೆಳೆಯುತ್ತಿರುವ ರಾಗಿ 40 ಕ್ವಿಂಟಾಲ್ ಗೂ ಅಧಿಕ ಇಳುವರಿ ನೀಡುವ ನಿರೀಕ್ಷೆಯಿದೆ.

ಸಾಂಪ್ರದಾಯಿಕ ರೀತಿ ರಾಗಿ ಒಂದೇ ಬಾರಿಗೆ ಕಟಾವು ಮಾಡಲಾಗುತ್ತಿದ್ದರೆ, ಗುಣಿ ಪದ್ಧತಿಯಲ್ಲಿ ಬಲಿತ ತೆನೆಗಳನ್ನು ಹಂತ ಹಂತವಾಗಿ ಕಟಾವು ಮಾಡಬಹುದು. ಸಧ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಗಿ ಕಟಾವು ಯಂತ್ರದಿಂದ ಕೂಲಿ ವೆಚ್ಚ ಕೂಡ ಕಡಿಮೆಯಾಗುತ್ತದೆ. ಜೊತೆಗೆ 3–5 ಅಡಿ ಎತ್ತರಕ್ಕೆ ಬೆಳೆಯುವ ರಾಗಿಯ ಪೈರು ಜಾನುವಾರುಗಳಿಗೆ ಗುಣಮಟ್ಟದ ಮೇವು ಒದಗಿಸುತ್ತದೆ.

“ವರ್ಷದಿಂದ ವರ್ಷಕ್ಕೆ ಮಳೆಯ ಕೊರತೆ ಕಂಡುಬರುತ್ತಿರುವಾಗ, ಗುಣಿ ಪದ್ಧತಿ ರೈತರಿಗೆ ಆಶಾದಾಯಿ. ಹೆಚ್ಚಿನ ಇಳುವರಿ, ಹೆಚ್ಚಿನ ಮೇವು, ಕಳೆ‌کنಟ್ರೋಲ್, ಮಳೆ ಕಡಿಮೆಯಾದರೂ ಒಳ್ಳೆಯ ಬೆಳೆ – ಇವು ಎಲ್ಲವೂ ಈ ಪದ್ಧತಿಯ ಫಲಗಳು. ಖರ್ಚು ಹೆಚ್ಚಾಗುವುದಿಲ್ಲ. ನನಗೆ ಈ ಬಾರಿ 40 ಕ್ವಿಂಟಾಲ್ ಗಿಂತ ಹೆಚ್ಚು ಇಳುವರಿ ಸಿಗುವ ನಿರೀಕ್ಷೆಯಿದೆ. ಸರ್ಕಾರ ನಿಗದಿ ಮಾಡಿದ 4,885 ರೂ. ಸಹಾಯಕ ಬೆಲೆಯೊಂದಿಗೆ ಈ ಪದ್ಧತಿ ರೈತರಿಗೆ ಅತ್ಯಂತ ಲಾಭದಾಯಕ. ಜೊತೆಗೆ ರೇಷ್ಮೆ, ತೊಗರಿ, ಅವರೆ, ಹೈನುಗಾರಿಕೆ ಹಾಗೂ ಕುರಿ–ಕೋಳಿ ಸಾಕಣೆ ಹೀಗೆ ಸಮಗ್ರ ಕೃಷಿ ಅಳವಡಿಸಿಕೊಂಡರೆ ರೈತರು ಆರ್ಥಿಕವಾಗಿ ಸದೃಢರಾಗಬಹುದು,” ಎಂದು ರೈತ ರಾಮಾಂಜಿನಪ್ಪ ಹೇಳಿದ್ದಾರೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version