
Sadahalli, Sidlaghatta, chikkaballapur : ಶಿಡ್ಲಘಟ್ಟ ತಾಲ್ಲೂಕಿನ ಸಾದಹಳ್ಳಿ ಗ್ರಾಮದ ದಾಳಿಂಬೆ ತೋಟಕ್ಕೆ ನುಗ್ಗಿದ ಕಳ್ಳರು ಸುಮಾರು 400 ಕೆಜಿ (ಒಂಬತ್ತು ಚೀಲ) ದಾಳಿಂಬೆ ಕದ್ದು ಕಾರಿನಲ್ಲಿ ತುಂಬುವ ವೇಳೆಯಲ್ಲಿ ತೋಟದ ಮಾಲೀಕರಿಂದಲೇ ಪತ್ತೆಯಾಗಿದ್ದಾರೆ. ರೈತರು ಜಾಗೃತೆಯಿಂದ ವರ್ತಿಸಿ ಇಬ್ಬರು ಆರೋಪಿಗಳನ್ನು ಸ್ಥಳದಲ್ಲೇ ಹಿಡಿದು 112 ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ರೈತ ಚಂದ್ರಪ್ಪ ಅವರ ತೋಟದಲ್ಲಿ ಬುಧವಾರ ರಾತ್ರಿ 8:30ರ ಸುಮಾರಿಗೆ ಶಂಕಾಸ್ಪದ ಚಲನವಲನ ಗಮನಕ್ಕೆ ಬಂದಿತು. ತಕ್ಷಣ ಟಾರ್ಚ್ ಹಿಡಿದು ತೋಟದೊಳಗೆ ತೆರಳಿದ ಅವರು ನಾಲ್ವರು ಶಂಕಿತರು ದಾಳಿಂಬೆ ಕಿತ್ತು ಚೀಲಗಳಲ್ಲಿ ತುಂಬಿ, ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಇಂಡಿಕಾ ಕಾರಿಗೆ ಹಾಕುತ್ತಿದ್ದುದನ್ನು ಕಂಡರು. ತಕ್ಷಣ ಅಣ್ಣ ರಾಜಣ್ಣ ಅವರನ್ನು ಕರೆಸಿ ಸಹಾಯದಿಂದ ಕಳ್ಳರನ್ನು ಹಿಡಿಯಲು ಪ್ರಯತ್ನಿಸಿದಾಗ, ಇಬ್ಬರು ಸ್ಥಳದಲ್ಲೇ ಸಿಕ್ಕಿ ಬಿದ್ದರು.
ಈ ಪ್ರಕರಣದಿಂದ ರೈತರ ನಡುವೆ ಕಳವಿನ ಭಯ ಮತ್ತೆ ಹೆಚ್ಚಾಗಿದೆ. ಬೆಲೆ ಏರಿಳಿತ, ಕಾರ್ಮಿಕ ಕೊರತೆ, ಹಾಗೂ ಪ್ರಕೃತಿ ಅವಾಂತರಗಳ ನಡುವೆ ಹಣ್ಣು ತೋಟವನ್ನು ಕಳ್ಳರಿಂದ ರಕ್ಷಿಸುವ ಹೊಸ ತಲೆನೋವು ರೈತರಿಗೆ ಎದುರಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕಳ್ಳತನಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸ್ಥಳೀಯರು ಪೊಲೀಸ್ ಇಲಾಖೆ ತೋಟ ಪ್ರದೇಶಗಳಲ್ಲಿ ರಾತ್ರಿ ಗಸ್ತು ಬಲಪಡಿಸಬೇಕೆಂದು ಆಗ್ರಹಿಸಿದ್ದಾರೆ.
ನೆರೆಯ ತೋಟದವರೇ ಕಳ್ಳರು :
ಸಾದಹಳ್ಳಿಯ ರೈತ ಚಂದ್ರಪ್ಪನ ತೋಟದ ಪಕ್ಕದ ತೋಟದ ಬೈರಗಾನಹಳ್ಳಿಯ ಮನೋಜ್ ಹಾಗು ಶಿವರಾಜ್ ನನ್ನು ಸ್ಥಳದಲ್ಲಿ ಹಿಡಿದು ಪೊಲೀಸರಿಗೆ ಒಪ್ಪಿಸಲಾಯಿತು. ಕೃತ್ಯಕ್ಕೆ ಬಳಿಸಿದ ಕಾರನ್ನು ವಶಪಡಿಸಿಕೊಂಡಿರುವ ಪೊಲೀಸರು ಪರಾರಿಯಾಗಿರುವ ಮತ್ತಿಬ್ಬರಾದ ಬೈರಗಾನಹಳ್ಳಿಯ ಚರಣ್ ಮತ್ತು ಮೋಹನ್ ಪತ್ತೆಹಚ್ಚುತ್ತಿದ್ದಾರೆ.
ಸುಮಾರು ಮೂರು ಎಕರೆ ಜಮೀನಿನಲ್ಲಿ ಸಾಲ ಮಾಡಿ ದಾಳಿಂಬೆ ಬೆಳೆಯನ್ನ ಬೆಳೆದಿದ್ದೆವು. ಸುಮಾರು 10 ರಿಂದ 12 ಲಕ್ಷ ರೂಗಳ ಬಂಡವಾಳವನ್ನು ಹಾಕಿ ತಾಯಿ ತನ್ನ ಮಗುವನ್ನು ಒಂಬತ್ತು ತಿಂಗಳು ಹೊಟ್ಟೆಯಲ್ಲಿ ಇರಿಸಿಕೊಂಡು ಯಾವ ರೀತಿ ಬೆಳೆಸುತ್ತಾಳೋ ಅದೇ ರೀತಿ ನಾವು ಈ ಬೆಳೆಯನ್ನ ಬೆಳೆದಿದ್ದೇವೆ. ಆ ಬೆಳಗೆ ಎಷ್ಟು ಕಷ್ಟಪಟ್ಟಿದ್ದೇವೆ ಅಂತ ನಮಗೆ ಗೊತ್ತಿದೆ. ನನ್ನ ಬಳಿಯ ಒಡವೆಗಳನ್ನೆಲ್ಲ ಅಡ ಇಟ್ಟು ಸಾಲ ಮಾಡಿ ಬಂಡವಾಳವನ್ನು ಹಾಕಿದ್ದೇವೆ. ಇನ್ನು ನನ್ನ ಬಳಿ ಇರುವುದು ಕೇವಲ ನನ್ನ ಮಾಂಗಲ್ಯ ಮಾತ್ರ. ಅವರಿಗೆ ಈ ದಾಳಿಂಬೆ ಹಣ್ಣು ಕದಿಯಲು ಮನಸ್ಸಾದರೂ ಹೇಗೆ ಬಂತು. ಅವರು ರೈತರಾಗಿದ್ದುಕೊಂಡು ಇನ್ನೊಬ್ಬ ರೈತರ ಕಷ್ಟವನ್ನು ಅರ್ಥ ಮಾಡಿಕೊಳ್ಳದೆ ಇಂತಹ ಕೃತ್ಯ ಮಾಡಿರೋದು ನಮಗೆ ಬೇಸರವಾಗುತ್ತಿದೆ. ತಪ್ಪತಸ್ಥರಿಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.
- ರೈತ ಮಹಿಳೆ ರೂಪಮ್ಮ