
Sidlaghatta (Chikkaballapur District) : ರೈತರ ಕೈಗೆಟುಕದ ಡ್ರೋನ್ ಬೆಲೆಗಳನ್ನು ಗಮನಿಸಿ, ಖಾಸಗಿ ಸಂಸ್ಥೆಯೊಂದು ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಕಡಿಮೆ ವೆಚ್ಚದಲ್ಲಿ ಡ್ರೋನ್ ಸೇವೆ ಒದಗಿಸಲು ಮುಂದಾಗಿದೆ. ಶುಕ್ರವಾರ, ಸ್ಥಳೀಯ ರೈತ ಮುನೀಂದ್ರ ಅವರ ಮೆಕ್ಕೆ ಜೋಳದ ತೋಟದಲ್ಲಿ ಡ್ರೋನ್ ಪ್ರಾಯೋಗಿಕ ಪರೀಕ್ಷೆ ನಡೆಸಲಾಯಿತು.
ಡ್ರೋನ್ ಮೂಲಕ ಕೃಷಿ ಔಷಧಿ ಸಿಂಪಡಣೆ ಒಂದು ಆಧುನಿಕ ಕೃಷಿ ತಂತ್ರಜ್ಞಾನ. ಇದು ಕೀಟನಾಶಕ, ಶಿಲೀಂಧ್ರನಾಶಕ ಮತ್ತು ಎಲೆ ಪೋಷಕ ದ್ರಾವಣಗಳನ್ನು ನಿಖರ ಪ್ರಮಾಣದಲ್ಲಿ ಸಿಂಪಡಿಸುವುದರೊಂದಿಗೆ ನೀರಿನ ವ್ಯರ್ಥತೆ ಕಡಿಮೆ, ಕಾರ್ಮಿಕರ ಕೊರತೆ ನಿವಾರಣೆ ಮತ್ತು ರೈತರ ಆರೋಗ್ಯ ರಕ್ಷಣೆ ಒದಗಿಸುತ್ತದೆ. ಒಂದು ಬಾರಿ 15 ನಿಮಿಷ ಹಾರಬಲ್ಲ ಈ ಡ್ರೋನ್‌ನ 10 ಲೀಟರ್ ಸಾಮರ್ಥ್ಯದ ಟ್ಯಾಂಕ್ ಮೂಲಕ 8 ನಿಮಿಷಗಳಲ್ಲಿ ಒಂದು ಎಕರೆ ಪ್ರದೇಶಕ್ಕೆ ಸಿಂಪಡಣೆ ಸಾಧ್ಯ.
“ಡ್ರೋನ್ ಬಳಕೆಯಿಂದ ದಿನಕ್ಕೆ 40 ಎಕರೆ ಬೆಳೆಗೆ ಔಷಧಿ ಸಿಂಪಡಿಸಬಹುದು. ಒಂದು ಎಕರೆಗೆ ₹600 ದರ ನಿಗದಿಪಡಿಸಲಾಗಿದೆ. ಕನಿಷ್ಠ 10 ಎಕರೆ ಹೊಲ ಹೊಂದಿರುವ ರೈತರಿಗೆ ನಾವೇ ಬಂದು ಸೇವೆ ಒದಗಿಸುತ್ತೇವೆ. ಇದು ಕಡಿಮೆ ನೀರಿನ ಬಳಕೆ ಹಾಗೂ ವೇಗವಾದ ಕಾರ್ಯವಿಧಾನದೊಂದಿಗೆ ರೈತರಿಗೆ ಅನುಕೂಲಕರ” ಎಂದು ಸುರೇಶ್ ಭಟ್ (ಗಾಯತ್ರಿ ಮೈಕ್ರೋ ಎಲಿಮೆಂಟ್ಸ್ ಅಂಡ್ ಕೆಮಿಕಲ್ಸ್ ಕಂಪನಿ) ತಿಳಿಸಿದರು.
ರೈತ ಮುನೀಂದ್ರ ತಮ್ಮ ಅನುಭವ ಹಂಚಿಕೊಂಡು, “ಈಗ ಮೋಟಾರಿಗೆ ಮತ್ತು ಕಾರ್ಮಿಕರಿಗೆ ಹೆಚ್ಚುವರಿ ವೆಚ್ಚ ಮಾಡಬೇಕಾಗಿದೆ. ಆದರೆ ಡ್ರೋನ್ ಸೇವೆ ಕೈಗೆಟಕುವ ದರದಲ್ಲಿ ಸಿಕ್ಕರೆ ನಮಗೆ ಬಹಳ ಪ್ರಯೋಜನವಾಗುತ್ತದೆ” ಎಂದು ಹೇಳಿದರು.
ಡ್ರೋನ್ ಪ್ರಾಯೋಗಿಕ ಪರೀಕ್ಷೆಯಲ್ಲಿ ಸಿದ್ದಪ್ಪ ಕಂಬೋಜಿ, ರಾಹುಲ್ ಭಾಸ್ಕರ್, ವಿಜಯ ಭಾಸ್ಕರ್, ಬಾಲಕೃಷ್ಣ, ನಂಜುಂಡರೆಡ್ಡಿ (ಲಕ್ಷ್ಮೀ ಕೃಪ ಟ್ರೇಡರ್ಸ್), ತ್ಯಾಗರಾಜ್, ರೆಡ್ಡಿ, ಹರೀಶ್ ಸೇರಿದಂತೆ ರೈತರು ಭಾಗವಹಿಸಿದ್ದರು.