Home News ರೈತರಿಗೆ ರಿಯಾಯಿತಿ ದರದಲ್ಲಿ ಬೀಜ ವಿತರಣಾ ಯೋಜನೆ

ರೈತರಿಗೆ ರಿಯಾಯಿತಿ ದರದಲ್ಲಿ ಬೀಜ ವಿತರಣಾ ಯೋಜನೆ

0
Sidlaghatta Farmers Seeds Subsidy Programme

Melur, Sidlaghatta : ಶಿಡ್ಲಘಟ್ಟ ತಾಲ್ಲೂಕು ಮೇಲೂರು ಗ್ರಾಮದಲ್ಲಿ ಶನಿವಾರ ನಡೆದ ಮಹಿಳಾ ಗ್ರಾಮಸಭೆಯಲ್ಲಿ ಕೃಷಿ ಸಹಾಯಕ ನಿರ್ದೇಶಕ ಪಿ.ಆರ್. ರವಿ ಮಾತನಾಡಿ, ತಾಲ್ಲೂಕಿನ ಸಣ್ಣ ಹಾಗೂ ಅತಿಸಣ್ಣ ರೈತರಿಗೆ ರಿಯಾಯಿತಿ ದರದಲ್ಲಿ ಪ್ರಮಾಣಿತ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ಯೋಜನೆಯಡಿಯಲ್ಲಿ ಸಾಮಾನ್ಯ ವರ್ಗದ ರೈತರಿಗೆ ಶೇ.೫೦ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ ಶೇ.೭೫ ರಿಯಾಯಿತಿ ದರದಲ್ಲಿ ಬೀಜಗಳು ಲಭ್ಯವಿದ್ದು, ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಕೃಷಿ ಯಾಂತ್ರೀಕರಣ ಯೋಜನೆಯಡಿಯಲ್ಲಿ, ಸಣ್ಣ ಟ್ರಾಕ್ಟರ್, ಕಳೆಕೊಚ್ಚುವ ಯಂತ್ರ, ಟ್ರಾಕ್ಟರ್ ಚಾಲಿತ ನೇಗಿಲು, ರೋಟರಿ ಟಿಲ್ಲರ್, ರಾಗಿ ಕಟಾವು ಯಂತ್ರ, ರೋಟೋವೇಟರ್‌ಗಳನ್ನು ಸಹ ಸಹಾಯಧನದೊಂದಿಗೆ ವಿತರಿಸಲಾಗುತ್ತಿದೆ. ತುಂತುರು ಹಾಗೂ ಹನಿ ನೀರಾವರಿ ಉಪಕರಣಗಳು ಎಲ್ಲ ವರ್ಗದ ರೈತರಿಗೆ ಶೇ.೯೦ ರಿಯಾಯಿತಿಯಲ್ಲಿ ೫ ಎಕರೆ ಒಳಪಟ್ಟು ಲಭ್ಯವಿದೆ ಎಂದು ತಿಳಿಸಿದ್ದಾರೆ.

ಅದರ ಜೊತೆಗೆ, ಮಣ್ಣು ಆರೋಗ್ಯ ಅಭಿಯಾನದಡಿ ತಾಲ್ಲೂಕಿನ ಆಯ್ದ ಗ್ರಾಮಗಳಲ್ಲಿ ಎಲ್ಲ ರೈತರಿಗೆ ಮಣ್ಣು ಆರೋಗ್ಯ ಚೀಟಿಗಳನ್ನು ವಿತರಿಸಲಾಗುತ್ತಿದೆ. ಚೀಟಿಗಳಲ್ಲಿನ ಶಿಫಾರಸು ಪ್ರಕಾರ ಪೋಷಕಾಂಶಗಳ ಕೊರತೆಯನ್ನು ನಿವಾರಿಸಲು ಅಗತ್ಯವಿರುವ ಪರಿಕರಗಳನ್ನು ಶೇ.೫೦ ರಿಯಾಯಿತಿಯಲ್ಲಿ ನೀಡಲಾಗುತ್ತದೆ.

ಇನ್ನೊಂದು ಮಹತ್ವದ ಯೋಜನೆಯಾಗಿ, ಹೆಚ್ಚಿನ ಇಳುವರಿ ಪಡೆದು ಸಾಧನೆ ಮಾಡಿದ ರೈತರಿಗೆ ಕೃಷಿ ಪ್ರಶಸ್ತಿಗಳ ಮೂಲಕ ಉತ್ಸಾಹ ನೀಡಲಾಗುವುದು ಎಂದು ಅವರು ವಿವರಿಸಿದರು.

ಸಭೆಗೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಶಿಕಲಾರಮೇಶ್, ಪಿಡಿಒ ಶಾರದಾ, ಕಾರ್ಯದರ್ಶಿ ಶ್ರೀನಿವಾಸರೆಡ್ಡಿ, ಸದಸ್ಯರಾದ ಎಂ.ಜೆ. ಶ್ರೀನಿವಾಸ್, ರವಿಪ್ರಸಾದ್, ವನಿತಾ, ಸವಿತಾ, ಕಮಲಮ್ಮ, ಕಾಯಕಮಿತ್ರ ರೇಣುಕಮ್ಮ, ಕೂಸಿನ ಮನೆಯ ಮೇಲ್ವಿಚಾರಕಿ ಸರೋಜ.ಎಸ್, ಕಲಾವತಿ ಮತ್ತು ಪಶುಸಖರು ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version