
Mallur, Sidlaghatta : ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಯಶಸ್ವಿಯಾಗಲು ಕೇವಲ ಪುಸ್ತಕದ ಓದಷ್ಟೇ ಸಾಲದು, ಪ್ರಾಯೋಗಿಕ ವ್ಯವಹಾರ ಜ್ಞಾನ ಅತ್ಯಗತ್ಯ. ಹಣಕಾಸಿನ ಸಾಕ್ಷರತೆ, ಮಾರುಕಟ್ಟೆಯ ವಿಶ್ಲೇಷಣೆ, ತೆರಿಗೆ, ಕಾನೂನು ಮತ್ತು ಡಿಜಿಟಲ್ ಕೌಶಲಗಳನ್ನು ವಿದ್ಯಾರ್ಥಿಗಳಲ್ಲಿ ವೃದ್ಧಿಸುವ ಉದ್ದೇಶದಿಂದ ಕಾಲೇಜು ವಿದ್ಯಾರ್ಥಿಗಳಿಂದ ಆಹಾರ ಮೇಳವನ್ನು ಆಯೋಜಿಸಿದ್ದೇವೆ ಎಂದು ಮಳ್ಳೂರು ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ.ಎನ್. ರಾಮಾಂಜಿನಪ್ಪ ತಿಳಿಸಿದರು.
ತಾಲ್ಲೂಕಿನ ಮಳ್ಳೂರಿನ ಸ್ವಾಮಿ ವಿವೇಕಾನಂದ ಪದವಿ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಆಹಾರ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಿಯುಸಿ ಮತ್ತು ಬಿಕಾಂ ವಿದ್ಯಾರ್ಥಿಗಳು ವ್ಯಾಪಾರ-ವಹಿವಾಟು, ಆಯ-ವ್ಯಯ, ವ್ಯವಹಾರಜ್ಞಾನ, ಉದ್ಯಮಶೀಲತೆ, ಸಂವಹನ ಕಲೆ ಮುಂತಾದವುಗಳನ್ನು ಬೆಳೆಸಿಕೊಳ್ಳಬೇಕು. ಕೇವಲ ನಾಲ್ಕು ಗೋಡೆಗಲ ನಡುವೆ ಕುಳಿತು ಪಾಠ ಕೇಳುವುದರಿಂದ ಬದುಕಿನಲ್ಲಿ ಯಶಸ್ವಿ ಆಗಲು ಸಾಧ್ಯವಿಲ್ಲ ಎಂದು ಹೇಳಿದರು.
ಆಹಾರ ಮೇಳದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ತಾವು ತೆರೆಯುವ ಅಂಗಡಿಯಲ್ಲಿ ತಯಾರಿಸುವ ಆಹಾರ ಪದಾರ್ಥಗಳಿಗೆ ಅವರೇ ಹಣವನ್ನು ಹೂಡಿ, ಅದರಲ್ಲಿ ಬರುವ ಲಾಭಾಂಶವನ್ನು ಹಂಚಿಕೊಳ್ಳುವರು. ಇತರೇ ವಿದ್ಯಾರ್ಥಿಗಳು ಮತ್ತು ಪೋಷಕರು ಬಂದು ವ್ಯಾಪಾರ ಮಾಡುವರು. ಈ ಎಲ್ಲಾ ಲೆಕ್ಕಾಚಾರವನ್ನು ಪ್ರಾಧ್ಯಾಪರಿಗೆ ನೀಡಬೇಕು. ಗುಣಮಟ್ಟ, ಶುಚಿತ್ವ, ರುಚಿ, ಬೆಲೆ ಮುಂತಾದ ಮಾನದಂಡಗಳ ಮೂಲಕ ಉತ್ತಮ ತಂಡಕ್ಕೆ ಬಹುಮಾನ ನೀಡುತ್ತೇವೆ ಎಂದರು.
ಆಹಾರ ಮೇಳವು ವಿದ್ಯಾರ್ಥಿಗಳಿಗೆ ಪಾಕಕಲೆ, ಪೌಷ್ಟಿಕಾಂಶ, ತಂಡದ ಕೆಲಸ ಮತ್ತು ಉದ್ಯಮಶೀಲತೆಯ ಪ್ರಾಯೋಗಿಕ ಜ್ಞಾನವನ್ನು ಒದಗಿಸುತ್ತವೆ. ವಿವಿಧ ಸಂಸ್ಕೃತಿಗಳ ಆಹಾರಗಳ ಪರಿಚಯ, ಆರೋಗ್ಯಕರ ಆಹಾರ ಪದ್ಧತಿ, ಸ್ವಚ್ಛತೆ, ಹಣಕಾಸಿನ ನಿರ್ವಹಣೆ, ಮತ್ತು ಸಂವಹನ ಕೌಶಲ್ಯಗಳನ್ನು ವಿದ್ಯಾರ್ಥಿಗಳು ಇದರಿಂದ ಕಲಿಯಬಹುದು ಎಂದು ನುಡಿದರು.
ಆಹಾರ ಮೇಳದಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ, ಸಾವಯವ ಪದಾರ್ಥಗಳಿಂದ ತಯಾರಿಸಿದ ತಿನಿಸುಗಳನ್ನು ಮಾರಾಟ ಮಾಡುವ ಮೂಲಕ ಗಮನ ಸೆಳೆದರು. ಪ್ರೌಢಶಾಲೆ, ಪ್ರಾಥಮಿಕ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ಮೇಳದಲ್ಲಿ ತಿನಿಸುಗಳನ್ನು ಕೊಳ್ಳುವ ಮೂಲಕ ಮೇಳದ ಕಳೆಯನ್ನು ಹೆಚ್ಚಿಸಿದ್ದರು.
ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಸದಸ್ಯರಾದ ಸಿ.ನಾರಾಯಣಸ್ವಾಮಿ, ಕೆ. ಮುನಿರೆಡ್ಡಿ, ಸಿ.ಎಂ. ದೇವರಾಜು, ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸಿ.ಎಂ.ಸುರೇಶ್, ಸ್ವಾಮಿ ವಿವೇಕಾನಂದ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಕೆ. ಸುರೇಶ್, ಪ್ರೌಢಶಾಲೆ ಮುಖ್ಯಶಿಕ್ಷಕ ವಿ. ವೆಂಕಟೇಶ್, ಆಂಗ್ಲ ಮಾಧ್ಯಮ ಪ್ರೌಢಶಾಲೆ ಮುಖ್ಯಶಿಕ್ಷಕ ಎಂ. ಕೆ. ನವೀನ್ ಕುಮಾರ್ ಹಾಜರಿದ್ದರು.