
Sidlaghatta : ತಾಲೂಕಿನ ಚಿಕ್ಕತೇಕಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (MNREGS) ಅಡಿಯಲ್ಲಿ ಕೈಗೊಳ್ಳಲಾಗಿರುವ ಕಾಲುವೆ ಅಭಿವೃದ್ಧಿ ಕಾಮಗಾರಿ ಸ್ಥಳದಲ್ಲಿ ‘ದುಡಿಯೋಣ ಬಾ’ ಅಭಿಯಾನ ನಡೆಯಿತು. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ನರೇಗಾ ಸಂಯೋಜಕ ಲೊಕೇಶ್ ಮಾತನಾಡಿ, ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಸರ್ಕಾರ ಹಲವಾರು ಬದಲಾವಣೆಗಳನ್ನು ತಂದಿದ್ದು, ಪ್ರತಿ ದಿನದ ಕೂಲಿಗೆ ₹370 ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ನರೇಗಾ ಕಾಮಗಾರಿಗಳ ಸ್ಥಳದಲ್ಲಿಯೇ ‘ದುಡಿಯೋಣ ಬಾ’ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಮಹಿಳೆಯರು, ಹಿರಿಯರು, ವಿಶೇಷ ಚೇತನರು ಹಾಗೂ ಗರ್ಭಿಣಿಯರಿಗೆ ಅನುವು ಮಾಡಿಕೊಡುವ ಬಗ್ಗೆ ಜಾಗೃತಿ ಮೂಡಿಸಲು ಈ ಅಭಿಯಾನ ಉದ್ದೇಶಿತವಾಗಿದೆ ಎಂದು ಅವರು ವಿವರಿಸಿದರು.
ನರೇಗಾ ಯೋಜನೆಯಡಿ ಅರ್ಹ ಫಲಾನುಭವಿಗಳು ವೈಯುಕ್ತಿಕ ಹಾಗೂ ಸಮುದಾಯ ಅಭಿವೃದ್ಧಿ ಕಾಮಗಾರಿಗಳನ್ನು ತಮ್ಮ ಜಾಬ್ ಕಾರ್ಡ್ ಮೂಲಕ ಪಡೆಯಬಹುದಾಗಿದ್ದು, ಸುಮಾರು ₹5 ಲಕ್ಷದವರೆಗೆ ಕಾಮಗಾರಿಗಳನ್ನು ಈ ಯೋಜನೆಯಡಿಯಲ್ಲಿ ಅನುಷ್ಠಾನಗೊಳಿಸಬಹುದು ಎಂದು ಲೊಕೇಶ್ ಹೇಳಿದರು.
ಯೋಜನೆಯ ಮಾಹಿತಿ ಪಡೆಯಲು ನರೇಗಾ ಸಹಾಯವಾಣಿ 8277506000 ಗೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ದೊಡ್ಡತೇಕಹಳ್ಳಿ ಪಿಡಿಓ ವಜ್ರೇಶ್ ಕುಮಾರ್, ಡಿಇಒ ಸುಧಾಕರ್, ಬಿಎಫ್‌ಟಿ ಮುನೇಶ್, ಜಿಕೆಎಂ ಲಕ್ಷ್ಮಿನರಸಮ್ಮ, ಕೂಲಿ ಕಾರ್ಮಿಕರು ಹಾಗೂ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.