
Sidlaghatta : ಅನಾದಿ ಕಾಲದಿಂದಲೂ ನೆರವೇರಿಸಿಕೊಂಡು ಬಂದಂತಹ ನಗರದ ಪೂಜಮ್ಮ ದೇವಿಯ ಕರಗಮಹೋತ್ಸವವನ್ನು ಮಂಗಳವಾರ ರಾತ್ರಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಸಂಪ್ರದಾಯ ಆಚಾರಗಳಂತೆ ದೇವಾಲಯದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಮಾಡಿ ನಂತರ ಹೂವಿನ ಕರಗವನ್ನು ಹೊರಲಾಯಿತು.
ನಗರದ ಶ್ರೀ ಪೂಜಮ್ಮ ದೇವಿಯ ಕರಗವನ್ನು ಕೋಲಾರದ ಎಸ್ ಅಗ್ರಹಾರದ ಪಿ.ಶಿವರಾಜ್ ರವರು ಹೊತ್ತಿದ್ದರು. ಶಿರದ ಮೇಲೆ ಕಳಶ ಹೊತ್ತು ಕುಣಿಯುವ ಕಲೆಯಾಗಿದ ಕರಗದಾಚರಣೆ ಎಂದರೆ ಆದಿಶಕ್ತಿಯ ಆಚರಣೆ ಎಂದು ನಂಬಲಾಗಿದೆ. ದೇವಸ್ಥಾನಕ್ಕೆ ಮೂರು ಸುತ್ತು ಪ್ರದರ್ಶನ ಮಾಡಿ ನಂತರ ದೇವಾಲಯದ ಮುಂಭಾಗದಲ್ಲಿ, ಮಾರಮ್ಮ ವೃತ್ತದಲ್ಲಿ, ಕೆಇಬಿ ಸರ್ಕಲ್ ಮತ್ತು ಕೋಟೆ ವೃತ್ತದಲ್ಲಿ ಆಯೋಜಿಸಲಾಗಿದ್ದ ವಾದ್ಯಗೋಷ್ಠಿಯ ವೇದಿಕೆಯಲ್ಲಿ ಕರಗ ಹೊತ್ತ ಪಿ.ಶಿವರಾಜ್ ತಮಟೆಯ ಶಬ್ದಕ್ಕೆ ಹೆಜ್ಜೆ ಹಾಕಿ ಕುಣಿದಾಡಿದರು.
ಅಲ್ಲಿದ್ದ ಸಾರ್ವಜನಿಕರು ಸಹ ಕರಗವನ್ನು ನೋಡಿ ಮನಸೋತಿದ್ದಲ್ಲದೇ ವಾದ್ಯಗೋಷ್ಠಿಯ ತಂಡದವರ ಸಂಗೀತಕ್ಕೆ ತಕ್ಕಂತೆ ಕುಣಿದರು.
ದೇವಿಯ ಕರಗ ವೀಕ್ಷಿಸಲು ಬರೀ ನಗರವಲ್ಲದೇ ತಾಲ್ಲೂಕಿನಾದ್ಯಂತ ಜನರು ಆಗಮಿಸಿದ್ದರು. ವಾದ್ಯಗೋಷ್ಠಿಯಲ್ಲಿ ಹಿಂದಿ, ಕನ್ನಡ, ತೆಲುಗು, ತಮಿಳು ಹಾಡುಗಳನ್ನು ವಾದ್ಯಗೋಷ್ಠಿ ತಂಡದವರು ಹಾಡಿ ನೃತ್ಯಗಳನ್ನು ಮಾಡಿದ್ದನ್ನು ನೋಡಿ ಕಣ್ತುಂಬಿಸಿಕೊಂಡರು.