
Devaramallur, Sidlaghatta (Chikkaballapur District) : ಬಯಲುಸೀಮೆ ಭಾಗದ ವಿಶೇಷ ಸಂಪ್ರದಾಯವಾದ “ಅತ್ತೆ ಮಳೆ ಹೊಂಗಲು” ಹಬ್ಬವನ್ನು ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಗ್ರಾಮದ ರೈತರು ಸಂಭ್ರಮದಿಂದ ಆಚರಿಸಿದರು. ಮಳೆಗಾಲದಲ್ಲಿ ಬೆಳೆದು ನಿಂತ ರಾಗಿ, ಅವರೆ, ಅಲಸಂದಿ, ಜೋಳ, ಸೂರ್ಯಕಾಂತಿ, ನೆಲಗಡಲೆ ಬೆಳೆಗಳು “ಕಣ್ ಕಿಸ್ರು” (ವಕ್ರ ದೃಷ್ಟಿ) ತಗುಲಿ ಹಾಳಾಗಬಾರದು ಎಂಬ ನಂಬಿಕೆಯಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ.
ಈ ಹಬ್ಬವನ್ನು ಗ್ರಾಮ ಹಿರಿಯರು ತೀರ್ಮಾನಿಸುವ ಮೂಲಕ ಪ್ರಾರಂಭಿಸಿ, ಊರ ತಳವಾರ ಮನೆ ಮನೆಗೂ ಸುದ್ದಿ ನೀಡುವ ಪದ್ಧತಿ ಇಂದಿಗೂ ಜೀವಂತವಾಗಿದೆ. ಗ್ರಾಮದ ಜನರಿಂದ ಸಂಗ್ರಹಿಸಿದ ಚಂದಾದಿಂದ ಪೂಜೆ ಸಾಮಗ್ರಿ ಹಾಗೂ ಒಂದು ಕುರಿಯನ್ನು ಖರೀದಿಸಿ, ಗಂಗಮ್ಮನ ಗುಡಿ, ಛಾವಡಿ ಅಥವಾ ಗ್ರಾಮ ಸಭಾ ಸ್ಥಳದಲ್ಲಿ ರಾಕ್ಷಸ ರೂಪದ “ಕೆರೆ ಬಂಟ” ಚಿತ್ರ ಬರೆದು ಹಬ್ಬವನ್ನು ಆಚರಿಸಲಾಯಿತು.
ಹೊಸ ಮಡಿಕೆಯಲ್ಲಿ ಅನ್ನ ಬೇಯಿಸಿ, ಲಕ್ಕಲಿ, ಹೊಂಗೆ, ಅಲಸಂದಿ, ತೊಗರಿ, ಬೇವಿನ ಸೊಪ್ಪು ಸೇರಿದಂತೆ ಒಂಬತ್ತು ವಿಧದ ಸೊಪ್ಪುಗಳನ್ನು ಸೇರಿಸಿ ತಯಾರಿಸಿದ ಅನ್ನದಲ್ಲಿ ಬಲಿ ಕೊಟ್ಟ ಕುರಿಯ ರಕ್ತವನ್ನು ಬೆರೆಸಿ ಹೊಲ ಹೊಲಗಳಿಗೆ ಚೆಲ್ಲುವ ಸಂಪ್ರದಾಯ ಪಾಲಿಸಲಾಯಿತು. ಇದರಿಂದ ಬೆಳೆಗಳಿಗೆ ವಕ್ರ ದೃಷ್ಟಿ ತಾಗುವುದಿಲ್ಲ ಎಂಬುದು ಗ್ರಾಮಸ್ಥರ ನಂಬಿಕೆ.
ನಂತರ ಕುರಿಯ ಮಾಂಸವನ್ನು ಗುಡ್ಡೆ ಮಾಡಿ ಚಂದಾ ನೀಡಿದ ಮನೆಗಳಿಗೆ ಹಂಚಲಾಯಿತು. ಮನೆಗಳಲ್ಲಿ ಮಾಂಸಾಹಾರ ಅಡುಗೆ ಮಾಡಿ ಸೇವಿಸುವುದರ ಮೂಲಕ ಗ್ರಾಮದ ದೇವರ ಆಶೀರ್ವಾದ ಹಾಗೂ ಸಮೃದ್ಧಿ ಬೆಳೆಗಾಗಿ ಪ್ರಾರ್ಥಿಸಲಾಯಿತು.