
Sidlaghatta (chikkaballapur district) : ನಾಡಿನುದ್ದಕ್ಕೂ ವೈಭವದಿಂದ ಆಚರಿಸಲ್ಪಡುವ ನವರಾತ್ರಿ ಹಬ್ಬದ ಕೊನೆಯ ದಿನದಂದು ಶಿಡ್ಲಘಟ್ಟ ನಗರದ ಶ್ರೀವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಶಮೀ (ಬನ್ನಿ) ವೃಕ್ಷ ಪೂಜೆಯನ್ನು ಧಾರ್ಮಿಕ ಶ್ರದ್ಧೆಯಿಂದ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಗಗನ ಸಿಂಧು ಅವರು ದುಷ್ಟರ ಶಿಕ್ಷೆ ಹಾಗೂ ಶಿಷ್ಟರ ರಕ್ಷಣೆಯ ಸಂಕೇತವಾಗಿ ಅಷ್ಟ ದಿಕ್ಕುಗಳಿಗೂ ಬಾಣಗಳನ್ನು ಬಿಟ್ಟರು. ಈ ಸಂದರ್ಭದಲ್ಲಿ ವೇದಬ್ರಹ್ಮ ದಾಶರಥಿ ಭಟ್ಟಾಚಾರ್ಯರು ಶಮೀ ವೃಕ್ಷ ಪೂಜೆಯ ಮಹತ್ವವನ್ನು ವಿವರಿಸಿ, ಪಾಪನಾಶಕ ಹಾಗೂ ಶತ್ರು ವಿಜಯದ ಸಂಕೇತವಾದ ಶಮೀ ವೃಕ್ಷವು ಪಾಂಡವರ ಕಾಲದಿಂದಲೂ ಮಹತ್ವ ಪಡೆದಿದೆ ಎಂದು ತಿಳಿಸಿದರು. ಅರ್ಜುನನು ಯುದ್ಧಾಸ್ತ್ರಗಳನ್ನು ಶಮೀ ವೃಕ್ಷದಲ್ಲಿ ಅಡಗಿಸಿ ಕೌರವರ ಕಣ್ಣಿಗೆ ಕಾಣದಂತೆ ಉಳಿಸಿಕೊಂಡಿದ್ದನೆಂಬ ಪ್ರಸಂಗವನ್ನು ಅವರು ನೆನಪಿಸಿದರು.
ಪೂಜಾ ವಿಧಿ ಮುಗಿದ ನಂತರ ಮಹಾ ಮಂಗಳಾರತಿ ನಡೆಯಿತು. ಭಕ್ತರು ಶಮೀ ವೃಕ್ಷದ ಎಲೆಗಳನ್ನು ಮುಡಿಗೇರಿಸಿಕೊಂಡು, ಕೆಲವರು ಮನೆಗೆ ಕೊಂಡೊಯ್ದು ಪೂಜಿಸಿದರು. ವಿಜಯದಶಮಿಯ ಈ ಸಂಪ್ರದಾಯವು ಸಾಂಪ್ರದಾಯಿಕ ಧಾರ್ಮಿಕ ನಂಬಿಕೆ ಮತ್ತು ಜನಜೀವನದಲ್ಲಿ ಹಸಿರು-ಶಾಂತಿ ನೆಮ್ಮದಿಯ ಸಂಕೇತವೆಂದು ಭಟ್ಟಾಚಾರ್ಯರು ವಿವರಿಸಿದರು.
ಕಾರ್ಯಕ್ರಮದಲ್ಲಿ ಶ್ರೀವೇಣುಗೋಪಾಲಸ್ವಾಮಿ ದೇವಾಲಯದ ಸೇವಾ ಮತ್ತು ಅಭಿವೃದ್ದಿ ಟ್ರಸ್ಟ್ ಅಧ್ಯಕ್ಷ ಬಳೆ ರಘು, ಸಂಚಾಲಕ ರೂಪಸಿ ರಮೇಶ್, ಕಾರ್ಯದರ್ಶಿ ಎಲ್. ಮಧುಸೂಧನ್, ಕೋಟೆ ಸೋಮೇಶ್ವರಸ್ವಾಮಿ ಅಭಿವೃದ್ದಿ ಸಮಿತಿ ಅಧ್ಯಕ್ಷ ನಾಗರಾಜ್ ಹಾಗೂ ಭಕ್ತರು ಭಾಗವಹಿಸಿದ್ದರು.