
Devaramallur, Sidlaghatta : ದೇವರುಗಳ ತವರೂರು ಎಂದೇ ಐತಿಹಾಸಿಕವಾಗಿ ಪ್ರಸಿದ್ಧಿಯಾದ ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ರೈತರು ಅತ್ಯಂತ ಸಡಗರ ಮತ್ತು ಸಂಪ್ರದಾಯಬದ್ಧವಾಗಿ ಆಚರಿಸಿದರು. ಕೇವಲ ಮನುಷ್ಯರಿಗಷ್ಟೇ ಅಲ್ಲದೆ, ತಮಗೆ ಅನ್ನ ನೀಡುವ ದನಕರುಗಳಿಗೂ ಈ ದಿನ ವಿಶೇಷ ಗೌರವ ಸಮರ್ಪಿಸಲಾಯಿತು.
ಆತ್ಮಾರಾಮಸ್ವಾಮಿಯ ಅಪರೂಪದ ವೈಭವ:
ಧನುರ್ಮಾಸದ ಪೂಜೆಗಳ ಸಮಾಪ್ತಿಯ ನಂತರ, ಸಂಕ್ರಾಂತಿಯ ಶುಭದಿನದಂದು ಗ್ರಾಮ ದೇವರು ಶ್ರೀ ಆತ್ಮಾರಾಮಸ್ವಾಮಿಯ ಉತ್ಸವ ಮೂರ್ತಿಯನ್ನು ಭವ್ಯವಾಗಿ ಅಲಂಕರಿಸಿದ ರಥದಲ್ಲಿ ಪ್ರತಿಷ್ಠಾಪಿಸಿ ಮೆರವಣಿಗೆ ನಡೆಸಲಾಯಿತು. ಚೋಳರು ಮತ್ತು ಪಲ್ಲವರ ಕಾಲದ ಈ ಪುರಾತನ ದೇವಾಲಯವು ತನ್ನ ವಿಶಿಷ್ಟ ಶಿಲ್ಪಕಲೆಗೆ ಹೆಸರಾಗಿದೆ. ಇಲ್ಲಿನ ರಾಮನ ವಿಗ್ರಹವು ‘ಚಿನ್ಮುದ್ರೆ’ಯಲ್ಲಿದ್ದು, ಪರಮಾತ್ಮ ಮತ್ತು ಜೀವಾತ್ಮದ ಬೆಸುಗೆಯನ್ನು ಸಾರುತ್ತದೆ. ರಾಮನ ಮುಂದೆ ಹನುಮಂತನು ಏಕತಾರಿ ಮತ್ತು ಚಿಟಿಕೆ ಹಿಡಿದು ಗಮಕ ಹಾಡುತ್ತಿರುವ ಅಪರೂಪದ ಶಿಲ್ಪವು ಭಕ್ತರ ಗಮನ ಸೆಳೆಯಿತು.
ಶಾಸನ ಕಲ್ಲಿನ ನೀರಿನಿಂದ ರಾಸುಗಳ ಸ್ನಾನ:
ಇಲ್ಲಿನ ಸಂಕ್ರಾಂತಿಯ ಮತ್ತೊಂದು ವಿಶೇಷವೆಂದರೆ, ರೈತರು ತಮ್ಮ ಎತ್ತು, ಎಮ್ಮೆ ಮತ್ತು ಹಸುಗಳನ್ನು ಊರ ಹೊರಗಿರುವ ಪುರಾತನ ಶಾಸನ ಕಲ್ಲನ್ನು ತೊಳೆದ ನೀರಿನಿಂದ ಸ್ನಾನ ಮಾಡಿಸುತ್ತಾರೆ. ಹೀಗೆ ಮಾಡುವುದರಿಂದ ರಾಸುಗಳಿಗೆ ಯಾವುದೇ ರೋಗ ಬರುವುದಿಲ್ಲ ಎಂಬ ಅಚಲ ನಂಬಿಕೆ ಇಲ್ಲಿನ ರೈತರಲ್ಲಿದೆ.
ಕಿಚ್ಚು ಹಾಯಿಸುವ ಸಾಹಸ:
ರಾತ್ರಿ ಗ್ರಾಮದ ಛಾವಡಿ ಬಳಿ ಕಾಟಮರಾಯನ ಗುಡಿಯ ಮುಂದೆ ಹಾಲು ಉಕ್ಕಿಸುವ ಕಾರ್ಯಕ್ರಮ ನಡೆಯಿತು. ಹಾಲು ಉತ್ತರ ದಿಕ್ಕಿಗೆ ಉಕ್ಕಿದ್ದನ್ನು ಕಂಡು ರೈತರು ಸಂಭ್ರಮಿಸಿದರು. ನಂತರ, ಸಾಂಪ್ರದಾಯಿಕವಾಗಿ ಬೆಂಕಿ ಹಾಕಿ ಅದರ ಮೇಲೆ ದನಕರುಗಳನ್ನು ಹಾಯಿಸಲಾಯಿತು. ಯುವಕರು ಬೆಂಕಿಯ ಭರಾಟೆಯನ್ನು ತಿರುಗಿಸುವ ಮೂಲಕ ಸಾಹಸ ಪ್ರದರ್ಶನ ನೀಡಿದರು. ಊರಿನ ಹಿರಿಯರು ಮತ್ತು ಯುವಕರು ಒಗ್ಗಟ್ಟಾಗಿ ಸುಗ್ಗಿಯ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.