
Jangamakote, sidlaghatta : ರೈತರು ಕೇವಲ ಬೆಳೆಗಳನ್ನು, ಫಸಲನ್ನು ಬೆಳೆಯುವುದರತ್ತ ಮಾತ್ರ ಗಮನ ಕೊಟ್ಟರೆ ಸಾಲದು. ಬದಲಿಗೆ ಮಾರುಕಟ್ಟೆಯ ತಂತ್ರಗಳನ್ನು ಅರಿತು ಬೇಡಿಕೆಯನುಸಾರ ಹವಾಮಾನಕ್ಕೆ ಅನುಗುಣವಾಗಿ ಬೆಳೆಗಳನ್ನು ಬೆಳೆಯಬೇಕೆಂದು ಜಂಗಮಕೋಟೆ ರೇಷ್ಮೆ ರೈತ ಉತ್ಪಾದಕರ ಕಂಪನಿ ಅಧ್ಯಕ್ಷ ಭಕ್ತರಹಳ್ಳಿ ಚಿದನಂದಮೂರ್ತಿ ರೈತರಿಗೆ ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆಯಲ್ಲಿ ನಡೆದ ಜಂಗಮಕೋಟೆ ರೇಷ್ಮೆ ರೈತ ಉತ್ಪಾದಕರ ಕಂಪನಿಯ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ರೈತರು ಸಾಷಕ್ಟು ಸಮಸ್ಯೆಗಳ ನಡುವೆಯೂ ಉತ್ತಮವಾದ ಫಸಲು, ಬೆಳೆಗಳನ್ನು ಬೆಳೆಯುತ್ತಾರೆ. ಆದರೆ ಮಾರುಕಟ್ಟೆ ತಂತ್ರಗಳನ್ನು ಅರಿಯುವಲ್ಲಿ ಎಡವುತ್ತಿದ್ದು ನಿರೀಕ್ಷೆಯಂತೆ ಲಾಭಗಳಿಸಲು ಸಾಧ್ಯವಾಗುತ್ತಿಲ್ಲ ಇಲ್ಲವೇ ನಷ್ಟ ಅನುಭವಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಮ್ಮ ಕಂಪನಿಯಲ್ಲಿ ಸಧ್ಯಕ್ಕೆ 1100 ಮಂದಿ ರೈತರು ಷೇರುದಾರರಾಗಿದ್ದು ಇನ್ನೂ 400 ಮಂದಿ ರೈತರನ್ನು ಷೇರುದಾರರನ್ನಾಗಿಸಲಾಗುವುದು. 2024-25ನೇ ಹಣಕಾಸು ವರ್ಷದಲ್ಲಿ ನಮ್ಮ ಕಂಪನಿಯಲ್ಲಿ 44 ಲಕ್ಷ ರೂ.ಗಳಷ್ಟು ಕೃಷಿ ಪರಿಕರಗಳ ವಹಿವಾಟು ನಡೆಸಿ ಲಾಭದಾಯಕವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕೃಷಿ, ರೇಷ್ಮೆ, ತೋಟಗಾರಿಕೆ ಬೇಸಾಯ ನಡೆಸಲು ಅಗತ್ಯವಾದ ಎಲ್ಲ ರೀತಿಯ ರಸಗೊಬ್ಬರ ಇನ್ನಿತರೆ ಪರಿಕರಗಳನ್ನು ಮಾರುಕಟ್ಟೆಗಿಂತಲೂ ಕಡಿಮೆ ಬೆಲೆಗೆ ರೈತರಿಗೆ ನೀಡಲಾಗುತ್ತಿದ್ದು ರೈತರ ಬೇಡಿಕೆಯಿಂದ ಇನ್ನೂ ಒಂದಷ್ಟು ಪರಿಕರಗಳನ್ನು ಮುಂದಿನ ದಿನಗಳಲ್ಲಿ ತಂದು ಮಾರಾಟ ಮಾಡಲಾಗುವುದು ಎಂದು ವಿವರಿಸಿದರು.
ರೈತರಿಗೆ ಕಾಲ ಕಾಲಕ್ಕೆ ತಜ್ಞರು, ವಿಜ್ಞಾನಿಗಳು, ಅಧಿಕಾರಿಗಳನ್ನು ಕರೆಸಿ ಸೂಕ್ತ ತರಬೇತಿ ಮಾರ್ಗದರ್ಶನ ನೀಡುವ ಕೆಲಸವನ್ನು ಕಂಪನಿಯಿಂದ ಮಾಡಲಾಗುತ್ತಿದ್ದು ಮುಂದಿನ ದಿನಗಳಲ್ಲಿ ರೈತರಿಗೆ ಇನ್ನಷ್ಟು ನೆರವು ನಿಡುವ ಕೆಲಸ ಮಾಡಲು ಈಗಾಗಲೆ ಕ್ರಿಯಾ ಯೋಜನೆ ರೂಪಿಸಿದ್ದು ನಿಮ್ಮೆಲ್ಲರ ಸಹಕಾರ ಇನ್ನಷ್ಟು ಬೇಕಿದೆ ಎಂದು ಕೋರಿದರು.
2024-25ನೇ ಹಣಕಾಸು ವರ್ಷದ ಲೆಕ್ಕ ಪತ್ರಗಳನ್ನು ಮಂಡಿಸಿ 2025-26ನೇ ಸಾಲಿನ ಯೋಜನಾ ವರದಿ ಮತ್ತು ಅಂದಾಜು ವೆಚ್ಚಕ್ಕೆ ಅನುಮೋದನೆ ಪಡೆಯಲಾಯಿತು.
ಕೇಂದ್ರ ರೇಷ್ಮೆ ಮಂಡಳಿ ವಿಜ್ಞಾನಿ ಡಾ.ಪರಮೇಶ್ವರ ನಾಯಕ, ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಹಾಪ್ ಕಾಮ್ಸ್ ಮಾಜಿ ಅಧ್ಯಕ್ಷ ಬಿ.ವಿ.ಮುನೇಗೌಡ, ರೇಷ್ಮೆ ಸಹಾಯಕ ನಿರ್ದೇಶಕ ಅಕ್ಮಲ್ ಪಾಷ, ಮಂಡ್ಯದ ವಿಕಸನ ಸಂಸ್ಥೆಯ ಕೆಂಪಯ್ಯ, ಕಂಪನಿ ಸಿಇಒ ಬಿ.ಆರ್.ಸುರೇಶ್, ನಿರ್ದೇಶಕರುಗಳಾದ ತಮ್ಮಣ್ಣ, ಮಂಜುನಾಥಗೌಡ, ನಾರಾಯಣಸ್ವಾಮಿ, ಜಯರಾಂ, ಕುಮಾರ್, ಮಂಜುನಾಥ್, ಮುರಳೀಧರ್, ಜಿ.ಸಿ.ಪ್ರಕಾಶ್, ಮುನಿರಾಜು, ಸರಿತಾಗಂಗಾಧರ್ ಭಾಗವಹಿಸಿದ್ದರು.