
Kothanur, Sidlaghatta : ಪಾರ್ಥೇನಿಯಂ ಎಂಬ ಕಳೆ ಗಿಡವು ಪರಿಸರದಲ್ಲಿದ್ದರೆ ಬೆಳೆ, ಜಾನುವಾರು ಸೇರಿದಂತೆ ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಾಗಾಗಿ ಅದರ ನಿರ್ವಹಣೆ ನಮ್ಮೆಲ್ಲ ಹೊಣೆ ಎಂದು ಜಿಕೆವಿಕೆ ಪ್ರಾಧ್ಯಾಪಕಿ ಹಾಗೂ ಯೋಜನಾ ಮುಖ್ಯಸ್ಥರಾದ ಡಾ.ಗೀತಾ ತಿಳಿಸಿದರು.
ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿ ಜಿಕೆವಿಕೆ ಅಂತಿಮ ಬಿಎಸ್ಸಿ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಎ.ಐ.ಸಿ.ಆರ್.ಪಿ ಕಳೆ ನಿರ್ವಹಣೆ ಅಡಿಯಲ್ಲಿ ಹಮ್ಮಿಕೊಂಡಿದ್ದ ಪಾರ್ಥೇನಿಯಂ ಜಾಗೃತಿ ಸಪ್ತಾಹದಲ್ಲಿ ಪಾಲ್ಗೊಂಡು ಮಾತನಾಡಿದರು.
ಪಾರ್ಥೇನಿಯಂ ಕಳೆ ಹೆಚ್ಚು ಪ್ರಮಾಣದಲ್ಲಿ ಪರಾಗ ಉತ್ಪಾದಿಸುವುದರಿಂದ ವಾತಾವರಣದಲ್ಲಿ ಸೇರಿ ಉಸಿರಾಟದ ಸಮಸ್ಯೆ ಉಂಟಾಗುತ್ತದೆ. ಮಣ್ಣಿನ ಗುಣಮಟ್ಟ ಹಾನಿ ಮಾಡುವ ಪಾರ್ಥೇನಿಯಂ ಕಳೆಯನ್ನು ಸಂಪೂರ್ಣ ವಿನಾಶ ಮಾಡುವುದು ಅಗತ್ಯವಾಗಿದೆ ಎಂದರು.
ಜೂನಿಯರ್ ಅಗ್ರೋನಮಿಸ್ಟ್ ಡಾ.ಕಮಲಾಬಾಯಿ ಮಾತನಾಡಿ, ಪಾರ್ಥೇನಿಯಂ ಗಿಡವನ್ನು ನಿರ್ಮೂಲನೆ ಗೊಳಿಸಲು ಸಾಮೂಹಿಕವಾಗಿ ಎಲ್ಲರೂ ಒಂದಾಗಿ ನಿರ್ವಹಣೆ ಮಾಡಬೇಕು. ಪಾರ್ಥೇನಿಯಂ ಹಾಗೂ ಇತರ ಕೃಷಿ ತ್ಯಾಜ್ಯಗಳನ್ನು ಬಳಸಿ ಕಾಂಪೋಸ್ಟ್ ಕೂಡ ತಯಾರಿಸಬಹುದು. ಜೈವಿಕ ಪದ್ಧತಿಯಲ್ಲಿ ಸಸ್ಯ ನಿಯೋಗಿ ಗಿಡಗಳಾದ ಚೆಂಡು ಹೂವು, ಸಂಜೆಮಲ್ಲಿಗೆಯನ್ನು ಬೆಳೆಸಿ ಈ ಕಳೆ ನಿರ್ವಹಣೆ ಮಾಡಬಹುದು ಎಂದರು.
ಈ ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು, ರೈತರು ಹಾಗೂ ಗ್ರಾಮಸ್ಥರು ಹಾಜರಿದ್ದರು.