Sidlaghatta, Chikkaballapur : ಶಿಡ್ಲಘಟ್ಟ ತಾಲ್ಲೂಕಿನಲ್ಲಿ ದಿತ್ವಾ ಚಂಡಮಾರುತದ ಪರಿಣಾಮವಾಗಿ ಕಳೆದ ಎರಡು ದಿನಗಳಿಂದ ಅಕಾಲಿಕ ಮಳೆಯಾಗುತ್ತಿದ್ದು, ರೈತರ ಜೀವನಕ್ಕೆ ತೀವ್ರ ಸಂಕಷ್ಟ ತಂದಿದೆ. ಕೊಯ್ಲಿಗೆ ಬಂದಿದ್ದ ರಾಗಿ ಬೆಳೆ ಮಣ್ಣಿಗೆ ಒರಗಿ ಹಾಳಾಗುತ್ತಿರುವುದನ್ನು ಕಂಡು ರೈತರು ನಿರಾಶೆಯಲ್ಲಿ ಮುಳುಗಿದ್ದಾರೆ.
ದಿತ್ವಾ ಚಂಡಮಾರುತದ ಪರಿಣಾಮ ವಿಪರೀತ ಚಳಿ ಹಾಗೂ ತುಂತುರು ಮಳೆಯ ವಾತಾವರಣ ನಿರ್ಮಾಣವಾಗಿದೆ. ಮಳೆಯ ನೀರು ತೆನೆಗಳಲ್ಲೇ ತುಂಬಿಕೊಂಡಿರುವುದರಿಂದ ಈಗಾಗಲೇ ನಿಂತಿದ್ದ ಪೈರುಗಳು ನೆಲಕ್ಕೊರಗಿವೆ. ಹಲವು ರೈತರ ಹೊಲಗಳಲ್ಲಿ ಇಳುವರಿ ಬರದೇ, ಕೊಯ್ಲು ಮಾಡಲಾಗದೆ ತೊಂದರೆ ಹೆಚ್ಚಾಗುತ್ತಿದೆ.
ತಾಲ್ಲೂಕಿನಾದ್ಯಂತ ಇದುವರೆಗೆ 12,256 ಹೆಕ್ಟೇರ್‌ಗಳಲ್ಲಿ ರಾಗಿ ಬಿತ್ತನೆ ನಡೆದಿದ್ದು, ಕೊಯ್ಲಿಗೆ ಬರದಿದ್ದ ಪ್ರದೇಶಗಳು ಹೆಚ್ಚಿನ ಹಾನಿ ಅನುಭವಿಸುತ್ತಿವೆ. ಇನ್ನೂ ಐದು–ಆರು ದಿನ ಮಳೆ ಮುಂದುವರಿದರೆ ತೆನೆಗಳಲ್ಲೇ ರಾಗಿ ಮೊಳೆಯುವ ಅಪಾಯ ಎದುರಿದೆ ಎಂದು ಕೃಷಿ ಇಲಾಖೆ ಎಚ್ಚರಿಸಿದೆ.
ಅಂತಿಮ ಹಂತದಲ್ಲಿರುವ ಬೆಳೆ ಹಾಳಾಗುತ್ತಿದ್ದಂತೆ ರೈತರ ಪರಿಶ್ರಮ ಮಣ್ಣಾಗುತ್ತಿದೆ. ಮಳೆ ನೀರು ಸೇರ್ಪಡೆಯಾಗಿ ನೆಲ ಜಾರಿ, ಮಣ್ಣು ಮೆತ್ತಾಗಿ, ಕೊಯ್ಲು ಯಂತ್ರಗಳು ಹೊಲಕ್ಕೆ ಪ್ರವೇಶಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಕೆಲ ಕಡೆಗಳಲ್ಲಿ ಮಣ್ಣಿನ ವಾಸನೆಯಿಂದ ಹುಲ್ಲು ಕೂಡ ಮೇವಿಗೆ ಅಸಾಧ್ಯವಾಗುವ ಸ್ಥಿತಿ ಬಂದಿದೆ.
"ಎರಡು ಎಕರೆಯಲ್ಲಿ ರಾಗಿ ಬಿತ್ತಿದ್ದೆ. ಇಳುವರಿ ಚೆನ್ನಾಗಿತ್ತು. ಆದರೆ ಈ ಚಂಡಮಾರುತದ ಮಳೆಯಿಂದ ಬೆಳೆಯೆಲ್ಲಾ ನೆಲಕ್ಕೊರಗಿದೆ. ರಾಗಿಯೂ ಹೋಯಿತು. ಮಣ್ಣು ಮೆತ್ತಿರುವುದರಿಂದ ಮೇವಿಗೂ ಬಳಸಲು ಆಗುವುದಿಲ್ಲ. ನಮ್ಮ ಪರಿಶ್ರಮವೆಲ್ಲಾ ವ್ಯರ್ಥವಾಗಿದೆ." ಎಂದು ಸ್ಥಳೀಯ ರೈತ ಭಾರ್ಗವ (ಅಪ್ಪೇಗೌಡನಹಳ್ಳಿ) ತಮ್ಮ ದುಃಖ ಹಂಚಿಕೊಂಡು ಹೇಳಿದರು.
ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ರೈತರು ಇದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ತುರ್ತು ಪರಿಹಾರ, ಹಾನಿ ಮೌಲ್ಯಮಾಪನ ಮತ್ತು ಪರಿಹಾರ ಧನಕ್ಕಾಗಿ ಸರ್ಕಾರದ ಹಸ್ತಕ್ಷೇಪದ ನಿರೀಕ್ಷೆಯಲ್ಲಿದ್ದಾರೆ.
For Daily Updates WhatsApp ‘HI’ to 7406303366
