Home News ರಕ್ಷಣೆ ಪ್ರಯತ್ನ ಫಲಕಾರಿಯಾಗದೆ ಯುವಕ ಸಾವು

ರಕ್ಷಣೆ ಪ್ರಯತ್ನ ಫಲಕಾರಿಯಾಗದೆ ಯುವಕ ಸಾವು

0
Sidlaghatta Gudihalli well youth death

ಶಿಡ್ಲಘಟ್ಟ ತಾಲ್ಲೂಕು ಗುಡಿಹಳ್ಳಿಯಲ್ಲಿ ಬಾವಿಯಲ್ಲಿ ಬಿದ್ದಿದ್ದ ಮೊಬೈಲ್ ತೆಗೆದುಕೊಳ್ಳಲೆಂದು ಬಾವಿಗೆ ಇಳಿದಿದ್ದ ಮೂವತ್ತೈದು ವರ್ಷದ ಅನಿಲ್ ಕುಮಾರ್ ಕೊನೆಗೂ ಮೃತಪಟ್ಟಿದ್ದು ಎನ್‌ಡಿಆರ್‌ಎಫ್ ಹಾಗೂ ಅಗ್ನಿಶಾಮಕ ತುರ್ತು ಸೇವೆಗಳ ಸಿಬ್ಬಂದಿಯು ಸತತ 12 ಗಂಟೆಗಳ ಕಾರ‍್ಯಾಚರಣೆ ನಡೆಸಿ ಶವವನ್ನು ಬಾವಿಯಿಂದ ಹೊರಗೆ ತೆಗೆಯಲಾಗಿದೆ.

 ತಾಲ್ಲೂಕಿನ ಅಬ್ಲೂಡು ಗ್ರಾಮ ಪಂಚಾಯಿತಿಯ ಗುಡಿಹಳ್ಳಿಯ ಅನಿಲ್ ಕುಮಾರ್ ತನ್ನ ತೋಟದ ಮಿಷನ್ ಶೆಡ್‌ನ ಒಳಗಿನ ಕಿರುಬಾವಿಯಲ್ಲಿ ಬಿದ್ದಿದ್ದ ಮೊಬೈಲ್‌ನ್ನು ತೆಗೆದುಕೊಳ್ಳಲೆಂದು ಒಬ್ಬಂಟಿಯಾಗಿ ಶನಿವಾರ ಬಾವಿಗೆ ಇಳಿದಿದ್ದ.

 ಕಿರಿದಾದ ಹಾಗೂ ಸುಮಾರು 60 ಅಡಿಗಳಿಗೂ ಆಳದ ಕಿರು ಬಾವಿಗೆ ಹಗ್ಗದ ನೆರವಿನಿಂದ ಇಳಿದಿದ್ದ ಅನಿಲ್ ಕುಮಾರ್ ತನ್ನ ಬೇಸಿಕ್ ಸೆಟ್ ಮೊಬೈಲ್‌ನ್ನು ತೆಗೆದುಕೊಂಡು ಶರ್ಟಿನ ಜೇಬಿನಲ್ಲಿ ಇಟ್ಟುಕೊಂಡಿದ್ದಾನೆ. ಆದರೆ ಅಲ್ಲಿ ಗಾಳಿಯ ಕೊರತೆಯಿಂದ ಉಸಿರುಗಟ್ಟಿ ನಿತ್ರಾಣಗೊಂಡು ಮೇಲೆ ಬರಲಾಗದೆ ಅಲ್ಲೇ ಕುಸಿದು ಬಿದ್ದಿದ್ದಾನೆ.

 ಶನಿವಾರ ಬೆಳಗ್ಗೆ ಅನಿಲ್ ಕುಮಾರ್ ಬಾವಿಗೆ ಇಳಿದಿದ್ದು ಮದ್ಯಾಹ್ನದ ವೇಳೆಗೆ ಸ್ಥಳೀಯ ಅಗ್ನಿಶಾಮಕ ತುರ್ತು ಸೇವೆಗಳ ಸಿಬ್ಬಂದಿಯು ಅನಿಲ್ ಕುಮಾರ್‌ನನ್ನು ಬಾವಿಯಿಂದ ಹೊರಗೆ ಎತ್ತುವ ಕಾರ‍್ಯಾಚರಣೆ ನಡೆಸಿದರೂ ಸಾಧ್ಯವಾಗಿರಲಿಲ್ಲ.

ರಾತ್ರಿವೇಳೆಗೆ ಎನ್‌ಡಿಆರ್‌ಎಫ್‌ನ  22 ಮಂದಿ ಸಿಬ್ಬಂದಿ ಹಾಗೂ ದೇವನಹಳ್ಳಿಯ ಅಗ್ನಿಶಾಮಕ ದಳದ ಸಿಬ್ಬಂದಿಯು ಆಗಮಿಸಿ ತಡರಾತ್ರಿಯವರೆಗೂ ಕಾರ‍್ಯಾಚರಣೆ ನಡೆಸಿ ಸೆನ್ಸಾರ್ ತಂತ್ರಜ್ಞಾನದ ಮೂಲಕ ಶೋಲ್ಡರ್ಸ್ ಲಾಕ್ ಮಾಡಿ ಮೇಲಕ್ಕೆತ್ತಲಾಯಿತು. ಆದರೆ ಅಷ್ಟರಲ್ಲಿ ಅನಿಲ್‌ಕುಮಾರ್‌ನ ಪ್ರಾಣ ಪಕ್ಷಿ ಹಾರಿಹೋಗಿತ್ತು.

ಉಪ ವಿಭಾಗಾಕಾರಿ ರಘುನಂದನ್, ತಹಶೀಲ್ದಾರ್ ಬಿ.ಎಸ್.ರಾಜೀವ್, ಸಿಪಿಐ ಧಮೇಗೌಡ, ಎಸ್‌ಐ ಸತೀಶ್ ಹಾಗೂ ಅಗ್ನಿಶಾಮಕ ಜಿಲ್ಲಾ ಘಟಕದ ನಾಗೇಶ್, ಶಿಡ್ಲಘಟ್ಟದ ರಾಮಕೃಷ್ಣಪ್ಪ ಹಾಗೂ ಸಿಬ್ಬಂದಿಯು ಸ್ಥಳದಲ್ಲೆ ಠಿಕಾಣಿಹೂಡಿದ್ದು ಸತತ ಆರೇಳು ಗಂಟೆಗಳ ಕಾಲ ಹರಸಾಹಸ ಕಾರ‍್ಯಾಚರಣೆ ನಡೆಸಿದರಾದರೂ ಅನಿಲ್ ಕುಮಾರ್ ಬದುಕುಳಿಯಲಿಲ್ಲ.

ಶಿಡ್ಲಘಟ್ಟದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಿದರು. ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version