Home News ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣ ಕಾಮಗಾರಿಯ ಪರಿಶೀಲನೆ

ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣ ಕಾಮಗಾರಿಯ ಪರಿಶೀಲನೆ

0
Sidlaghatta Hitech Silk Cocoon Market Inspection

Sidlaghatta : ಶಿಡ್ಲಘಟ್ಟ ಮತ್ತು ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ತಲಾ 200 ಕೋಟಿ ರೂ.ವೆಚ್ಚದಲ್ಲಿ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣವಾಗುತ್ತಿದೆ. ಹಾವೇರಿ, ಕಲ್ಬುರ್ಗಿ ಮತ್ತು ಮೈಸೂರಲ್ಲಿ 15-20 ಕೋಟಿ ರೂ.ವೆಚ್ಚದಲ್ಲಿ ಸಣ್ಣ ಮಾರುಕಟ್ಟೆ ನಿರ್ಮಾಣವಾಗುತ್ತಿದೆ ಎಂದು ರೇಷ್ಮೆ ಇಲಾಖೆ ಆಯುಕ್ತೆ ಹಾಗೂ ರೇಷ್ಮೆ ನಿರ್ದೇಶಕಿ ಶಿಲ್ಪನಾಗ್ ತಿಳಿಸಿದರು.

ತಾಲ್ಲೂಕಿನ ಹನುಮಂತಪುರ ಬಳಿ ನಿರ್ಮಾಣವಾಗುತ್ತಿರುವ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ನಿರ್ಮಾಣ ಕಾಮಗಾರಿ ವೀಕ್ಷಿಸಿ ಸಂಬಂಧಿಸಿದವರಿಂದ ಮಾಹಿತಿ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣವಾಗುವುದರಿಂದ ರೇಷ್ಮೆ ಗೂಡು ಬೆಳೆಯುವ ರೈತರು ಮತ್ತು ರೇಷ್ಮೆಗೂಡು ಖರೀದಿಸಿ ರೇಷ್ಮೆನೂಲು ಬಿಚ್ಚಾಣಿಕೆ ಮಾಡುವ ರೀಲರುಗಳಿಗೆ ಅನೇಕ ರೀತಿಯಲ್ಲಿ ಅನುಕೂಲವಾಗಲಿದೆ ಎಂದು ಹೇಳಿದರು.

ಹೈಟೆಕ್ ಮಾರುಕಟ್ಟೆ ನಿರ್ಮಾಣದಿಂದ ಹೆಚ್ಚಿನ ತಾಂತ್ರಿಕತೆ ಅಳವಡಿಸಿಕೊಳ್ಳಬಹುದು. ಗೂಡು ಖರೀದಿಯಲ್ಲಿ ಮತ್ತಷ್ಟು ಪಾರದರ್ಶಕತೆ ತರಬಹುದಾಗಿದೆ. ರೇಷ್ಮೆಗೂಡಿಗೆ ಗುಣಮಟ್ಟದ ಆಧಾರದಲ್ಲಿ ಬೆಲೆ ಸಿಗುವಂತೆ ಇದರಿಂದ ಸಾಧ್ಯ ಎಂದು ವಿವರಿಸಿದರು.

ಈ ದಿನ ನಾವು ಮತ್ತು ಜಿಲ್ಲಾಧಿಕಾರಿಗಳು ನಿರ್ಮಾಣ ಹಂತದ ಮಾರುಕಟ್ಟೆಯನ್ನು ವೀಕ್ಷಿಸಿದ್ದು ರೀಲರು, ರೈತರ ಹಿತದೃಷ್ಟಿಯಿಂದ ಒಂದಷ್ಟು ಮಾರ್ಪಾಡುಗಳನ್ನು ಮಾಡಬೇಕಾಗುತ್ತದೆ. ಇದೀಗ ಹಳೆಯ ರೇಷ್ಮೆಗೂಡು ಮಾರುಕಟ್ಟೆಗೆ ಆವಕವಾಗುತ್ತಿರುವ ರೇಷ್ಮೆಗೂಡು, ಹರಾಜು ಕೂಗಲು ಬರುವ ರೀಲರುಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ 40 ವರ್ಷಗಳ ದೂರದೃಷ್ಟಿಯಿಂದ ಕಟ್ಟಡ ನಿರ್ಮಾಣದಲ್ಲಿ ಅಲ್ಪ ಸ್ವಲ್ಪ ಬದಲಾವಣೆ ಮಾಡಲಾಗುವುದು ಎಂದರು.

ರೇಷ್ಮೆ ಬೆಳೆಗಾರರು ರೇಷ್ಮೆಗೂಡು ಬಿಡ್ಡಿಂಗ್‌ ನ್ನು ಆಪ್‌ ನಲ್ಲಿ ನೋಡಿ ಬಿಡ್ಡಿಂಗ್‌ ನ್ನು ಸ್ವೀಕರಿಸುವ ಅಥವಾ ರದ್ದುಪಡಿಸುವ ತಂತ್ರಾಂಶದ ಆಪ್‌ನ್ನು ಕೆಲ ಕಡೆ ಬಳಸುತ್ತಿದ್ದು ಇಲ್ಲಿಯೂ ಬಳಸುವ ಚಿಂತನೆ ಇದೆ. ಒಟ್ಟಾರೆ ಎಲ್ಲ ರೀತಿಯಲ್ಲಿ ಆಧುನಿಕತೆಯ ತಾಂತ್ರಿಕತೆಗಳನ್ನು ಅಳವಡಿಸಿ ರೀಲರು, ರೈತರಿಗೆ ಅನುಕೂಲ ಮಾಡಿಕೊಡುವ ಮಾರುಕಟ್ಟೆ ಇದಾಗಬೇಕೆಂಬ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತಿವೆ ಎಂದು ತಿಳಿಸಿದರು.

ದೇಶದ ರೇಷ್ಮೆ ಉತ್ಪಾದನೆಯಲ್ಲಿ ಕರ್ನಾಟಕದಿಂದಲೆ ಶೇ 43ರಷ್ಟು ಪ್ರಮಾಣದಲ್ಲಿ ರೇಷ್ಮೆ ಉತ್ಪಾದನೆ ಆಗುತ್ತಿದ್ದು ಮೊದಲ ಸ್ಥಾನದಲ್ಲಿದ್ದೇವೆ. ಇದೆಲ್ಲವನ್ನೂ ಗಮನಿಸಿ ಇಲ್ಲಿ 120 ಟನ್ ರೇಷ್ಮೆಗೂಡು ಸಾಮರ್ಥ್ಯದ 2 ಗೋದಾಮುಗಳನ್ನು ನಿರ್ಮಿಸಲಾಗುವುದು ಎಂದು ವಿವರಿಸಿದರು.

ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ಕಾಮಗಾರಿಯನ್ನು 24 ರಿಂದ 26 ತಿಂಗಳೊಳಗೆ ಪೂರ್ಣಗೊಳಿಸುವ ಪ್ರಯತ್ನ ನಡೆಯುತ್ತಿದೆ. ಭಾರತದಲ್ಲೇ ಮೊದಲ ಬಾರಿಗೆ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಆಟೋಮೇಟೆಡ್ ಕನ್ವೇಯರ್ ಸಿಸ್ಟಮ್ ಅಳವಡಿಸಲಾಗುತ್ತಿದ್ದು, ಇದರ ಮೂಲಕ ರೇಷ್ಮೆಗೂಡುಗಳ ಸಾಗಣೆ ಹಾಗೂ ಹರಾಜು ಪ್ರಕ್ರಿಯೆ ಹೆಚ್ಚು ವೇಗವಾಗಿ ಮತ್ತು ಪಾರದರ್ಶಕವಾಗಿ ನಡೆಯಲಿದೆ ಎಂದರು.

ಜಿಲ್ಲಾಧಿಕಾರಿ ಜಿ.ಪ್ರಭು ಮಾತನಾಡಿ, ಶಿಡ್ಲಘಟ್ಟವು ಬೆಂಗಳೂರು ನಗರಕ್ಕೆ ಸಮೀಪದಲ್ಲಿರುವುದರಿಂದ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯು ಕೈಗಾರಿಕೆಗಳ ಬೆಳವಣಿಗೆಗೆ ಉತ್ತಮ ಅವಕಾಶ ಹೊಂದಿರುವುದರಿಂದ ಇಲ್ಲಿ ನಿರ್ಮಾಣವಾಗುತ್ತಿರುವ ಈ ಮಾರುಕಟ್ಟೆ ಭವಿಷ್ಯದಲ್ಲಿ ಪ್ರಮುಖ ಕೇಂದ್ರವಾಗಿ ರೂಪುಗೊಳ್ಳಲಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿ.ಇ.ಒ ಡಾ.ವೈ.ನವೀನ್ ಭಟ್, ತಹಶೀಲ್ದಾರ್ ಗಗನಸಿಂಧು, ರೇಷ್ಮೆ ಜಂಟಿ ನಿರ್ದೇಶಕ ವೈ.ಟಿ.ತಿಮ್ಮಯ್ಯ, ಜಂಟಿ ನಿರ್ದೇಶಕ ಕೆ.ಎನ್.ರವಿ, ರೇಷ್ಮೆ ಉಪ ನಿರ್ದೇಶಕರಾದ ಮಾರಪ್ಪ ಬೀರಲದಿನ್ನೆ, ಉಮೇಶ್, ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ.ರಂಗಪ್ಪ, ರೇಷ್ಮೆ ಸಹಾಯಕ ನಿರ್ದೇಶಕರಾದ ಅಕ್ಮಲ್ ಪಾಷ, ಜಯಶಂಕರ್, ಮದನ್ ಗೋಪಾಲ್ ರೆಡ್ಡಿ, ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಾಥರೆಡ್ಡಿ ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version