Melur, Sidlaghatta : ರಾಜ್ಯದಲ್ಲಿಯೆ ಅತಿ ಹೆಚ್ಚು ರೇಷ್ಮೆಗೂಡಿನ ವಹಿವಾಟು ನಡೆಯುವ ರೇಷ್ಮೆ ನಗರಿ ಶಿಡ್ಲಘಟ್ಟದಲ್ಲಿ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣಕ್ಕೆ ನಗರಕ್ಕೆ ಹೊಂದಿಕೊಂಡಂತೆ ಜಾಗವನ್ನು ಗುರ್ತಿಸಿ ಅಂತಿಮಗೊಳಿಸಲಾಗುವುದು ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ತಾಲ್ಲೂಕಿನ ಮೇಲೂರಿನ ಗೃಹ ಕಚೇರಿಯಲ್ಲಿ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆಗೆ ಸೂಕ್ತ ಜಾಗ ಗುರ್ತಿಸಿ ಅಂತಿಮಗೊಳಿಸುವ ಬಗ್ಗೆ ರೈತರು ಹಾಗೂ ರೀಲರುಗಳೊಂದಿಗೆ ಚರ್ಚಿಸಿದ್ದಾರೆ. ಜತೆಗೆ ಅಧಿಕಾರಿಗಳ ಸಲಹೆಯನ್ನು ಪಡೆದುಕೊಂಡಿದ್ದಾರೆ.
ಅನೌಪಚಾರಿಕ ಸಭೆಯ ನಂತರ ಮಾದ್ಯಮದವರೊಂದಿಗೆ ಮಾತನಾಡಿದ ಶಾಸಕ ರವಿಕುಮಾರ್, ಶಿಡ್ಲಘಟ್ಟ ನಗರಕ್ಕೆ ಹೊಂದಿಕೊಂಡಂತೆ ಹನುಮಂತಪುರ, ವರದನಾಯಕಹಳ್ಳಿ ಬಳಿ ಹೈಟೆಕ್ ಮಾರುಕಟ್ಟೆ ನಿರ್ಮಾಣಕ್ಕೆ ಜಾಗವನ್ನು ನೋಡಿದ್ದೇವೆ.
ರೀಲರುಗಳಿಗೆ ಹತ್ತಿರವಾಗಲಿದ್ದು ರೈತರಿಗೂ ಅನುಕೂಲಕರವಾದ ಈ ಜಾಗವನ್ನು ಅಂತಿಮಗೊಳಿಸಲಿದ್ದೇವೆ. ಅದಕ್ಕೂ ಮುನ್ನ ಸಂಬಂಧಿಸಿದ ಅಧಿಕಾರಿಗಳು, ರೈತ ಮುಖಂಡರು ಹಾಗೂ ರೀಲರುಗಳ ಮುಖಂಡರೊಂದಿಗೆ ಒಂದೆರಡು ಸುತ್ತು ಮಾತು ಕತೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.
ಶಿಡ್ಲಘಟ್ಟ ನಗರಕ್ಕೆ ದೂರದಲ್ಲಿ ಸಾಕಷ್ಟು ಕಡೆ ಜಾಗ ಲಭ್ಯತೆ ಇದೆ. ಆದರೆ ನಗರದಿಂದ ದೂರದಲ್ಲಿ ಮಾರುಕಟ್ಟೆ ಇದ್ದರೆ ರೀಲರುಗಳಿಗೆ ತೊಂದರೆ ಆಗಲಿದ್ದು ಮಾರುಕಟ್ಟೆಯಲ್ಲಿ ವಹಿವಾಟು ಕುಸಿಯುತ್ತದೆ ಎಂದು ಹೇಳಿದರು.
ರೀಲರುಗಳು ಹಾಗೂ ರೈತರ ಅನುಕೂಲ ನೋಡಿಕೊಂಡು ಸೂಕ್ತ ಜಾಗವನ್ನು ಅಂತಿಮಗೊಳಿಸಿ ಸುಮಾರು 100 ಕೋಟಿ ರೂ.ವೆಚ್ಚದಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಾಣ ಆಗಲಿದ್ದು ಶಿಡ್ಲಘಟ್ಟ ಕ್ಷೇತ್ರದ ಅಭಿವೃದ್ದಿಗೂ ಪೂರಕವಾಗಲಿದೆ ಎಂದು ಅವರು ಆಶಿಸಿದರು.
ಡಯಾಲಿಸೀಸ್ ಕೇಂದ್ರ : ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ 8 ಹಾಸಿಗೆಗಳ ಡಯಾಲಿಸೀಸ್ ಕೇಂದ್ರ ಕಟ್ಟಡ ನಿರ್ಮಿಸಲು ಅಗತ್ಯ ಜಾಗವನ್ನು ಗುರುತಿಸಿದ್ದೇವೆ. ಈಗಿರುವ ಡಯಾಲಿಸೀಸ್ ಕೇಂದ್ರದಲ್ಲಿ ಕೇವಲ ಎರಡು ಹಾಸಿಗೆಗಳಿವೆ. ಶಿಡ್ಲಘಟ್ಟ ತಾಲ್ಲೂಕಿನಲ್ಲಿರುವ ಡಯಾಲಿಸೀಸ್ ರೋಗಿಗಳಿಗೆ ಇಲ್ಲಿ ಸವಲತ್ತು ಸಿಗುತ್ತಿಲ್ಲ. ಹೊರಗೆ ಹೋಗಿ ಚಿಕಿತ್ಸೆ ಪಡೆದು ಬರುತ್ತಿದ್ದು ಅವರೆಲ್ಲರಿಗೂ ಸರ್ಕಾರಿ ಆಸ್ಪತ್ರೆಯಲ್ಲಿಯೇ ಡಯಾಲಿಸೀಸ್ ಆಗಬೇಕಿದೆ ಎಂದರು.
ಮುಖಂಡರಾದ ತಾದೂರು ರಘು, ಹನುಮಂತಪುರ ವಿಜಯಕುಮಾರ್ ಹಾಜರಿದ್ದರು.