Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಅಮರಾವತಿ ಬಳಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ರೈತರಿಂದ ಸ್ವಾನಪಡಿಸಿಕೊಂಡಿದ್ದ ಜಮೀನಿಗೆ ಬದಲಿಯಾಗಿ ಪರ್ಯಾಯ ಜಮೀನನ್ನು ರೈತರಿಗೆ ನೀಡುವಂತೆ ಜಿಲ್ಲಾಧಿಕಾರಿ ಅವರನ್ನು ಶಾಸಕ ಬಿ.ಎನ್.ರವಿಕುಮಾರ್ ಒತ್ತಾಯಿಸಿದ್ದಾರೆ.
ಚಿಕ್ಕಬಳ್ಳಾಪುರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಅವರನ್ನು ಭೇಟಿ ಮಾಡಿದ ಶಾಸಕ ಬಿ.ಎನ್.ರವಿಕುಮಾರ್ ಅವರು, ಜಂಗಮಕೋಟೆ ಹೋಬಳಿ ಅಮರಾವತಿ ಬಳಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕಾಗಿ 171 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಈಗಾಗಲೆ ಈ ಜಮೀನನ್ನು ರಾಜ್ಯ ಸರಕಾರಕ್ಕೆ ರಾಜ್ಯಪಾಲರ ಪರವಾಗಿ ನೋಂದಣಿ ಮಾಡಲಾಗಿದೆ. 171 ಎಕರೆ ಪೈಕಿ 56 ಎಕರೆ ಗೋಮಾಳ ಜಮೀನು, 61 ಎಕರೆ ಜಮೀನನ್ನು ಖರೀದಿಸಲಾಗಿದೆ. ಉಳಿದ 53 ಎಕರೆ ಜಮೀನನ್ನು ರೈತರಿಂದ ಸ್ವಾಧೀನಪಡಿಸಿಕೊಳ್ಳಲಾಗಿದೆ.
ರೈತರಿಂದ ಸ್ವಾಧೀನಪಡಿಸಿಕೊಂಡ ಜಮೀನಿಗೆ ಬದಲಿಯಾಗಿ 53 ಎಕರೆ ಜಮೀನನ್ನು ಒನ್ ಟು ಪೈ ದುರಸ್ತಿ ಮಾಡಿ ನೀಡಬೇಕೆಂದು ಡಿಸಿ ಅವರಲ್ಲಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿ ಎನ್.ಎಂ.ನಾಗರಾಜ್, ಈಗಾಗಲೆ ರೈತರಿಗೆ ಬದಲಿಯಾಗಿ ಪರ್ಯಾಯ ಜಮೀನು ನೀಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಶೀಘ್ರವೇ ರೈತರಿಗೆ ಜಮೀನು ವಿತರಿಸಲಾಗುವುದು, ರೈತರಿಂದ ಖರೀಸಿದ 61 ಎಕರೆ ಜಮೀನಿಗೆ ಹಣವನ್ನು ರೈತರಿಗೆ ವಿತರಿಸಿಯಾಗಿದೆ ಎಂದು ಸ್ಪಷ್ಟಪಡಿಸಿದರು.
ಇನ್ನು ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣಕ್ಕೆ ಬಿಜೆಪಿ ಸರ್ಕಾರವಿದ್ದಾಗ ಬಜೆಟ್‌ನಲ್ಲಿ 75 ಕೋಟಿ ರೂ ಘೋಷಣೆಯಾಗಿದ್ದು 10 ರಿಂದ 15 ಎಕರೆಯಷ್ಟು ಜಮೀನು ಅಗತ್ಯವಿದೆ. ಶಿಡ್ಲಘಟ್ಟ ನಗರದಲ್ಲಿ ಅಷ್ಟು ಪ್ರಮಾಣದ ಜಾಗ ಎಲ್ಲೂ ಇಲ್ಲ.
ಹಾಗಾಗಿ ಶಿಡ್ಲಘಟ್ಟ ನಗರಕ್ಕೆ ಹೊಂದಿಕೊಂಡಂತೆ ವರದನಾಯಕನಹಳ್ಳಿಯ ಸರ್ವೆ ನಂಬರ್ 19 ರಲ್ಲಿ 300 ಎಕರೆ ಸರ್ಕಾರಿ ಜಮೀನು ಇದೆ. ಅಲ್ಲಿ ಈಗಾಗಲೆ ಕೆಲ ಸರ್ಕಾರಿ ಕಚೇರಿಗಳಿಗೆ ಜಮೀನನ್ನು ಮಂಜೂರು ಮಾಡಿದೆ. ಕೈಗಾರಿಕೆ ಪ್ರಾಂಗಣಕ್ಕೂ ಅಲ್ಲಿ ಜಾಗ ಮೀಸಲಿಟ್ಟಿದೆ.
ಅಲ್ಲಿ ಹೈಟೆಕ್ ಮಾರುಕಟ್ಟೆಗೆ ಜಾಗವನ್ನು ಗುರುತಿಸುವ ಬಗ್ಗೆ ಶಾಸಕ ರವಿಕುಮಾರ್ ಹಾಗೂ ಡಿಸಿ ನಾಗರಾಜ್ ಅವರು ಚರ್ಚಿಸಿದ್ದು ಸೂಕ್ತ ಹಾಗೂ ಅಗತ್ಯದಷ್ಟು ಜಾಗವನ್ನು ಗುರ್ತಿಸಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸುವುದಾಗಿ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಅವರು ಈ ವೇಳೆ ತಿಳಿಸಿದ್ದಾರೆ.
ರೇಷ್ಮೆ, ಕೃಷಿ, ಪಶು ವೈದ್ಯಕೀಯ ಮುಂತಾದ ಕಚೇರಿಗಳಲ್ಲಿ ಸಿಬ್ಬಂದಿ ಕೊರತೆಯಿಂದ ರೈತರಿಗೆ ಆಗುತ್ತಿರುವ ತೊಂದರೆ, ಕೆಲಸ ಕಾರ್ಯಗಳ ವಿಳಂಬದ ಬಗ್ಗೆ ಚರ್ಚಿಸಿದ್ದು ಈ ಸಮಸ್ಯೆ ಪರಿಹಾರಕ್ಕೆ ಪರ್ಯಾಯ ಮಾರ್ಗಗಳನ್ನು ಹುಡುಕುವುದಾಗಿ ಜಿಲ್ಲಾಧಿಕಾರಿ ನಾಗರಾಜ್ ಅವರು ಶಾಸಕರಿಗೆ ಭರವಸೆ ನೀಡಿದ್ದಾರೆ.